ಜಿಲ್ಲೆ

ಹಣ ಕೊಡಿಸುವುದಾಗಿ ಚಿನ್ನದ ಬಳೆ ಪಡೆದು ಪರಾರಿ

sspmiracle1982

*ಮೀನು ವ್ಯಾಪಾರಕ್ಕೆ ಬಂದಿದ್ದ ವ್ಯಕ್ತಿಗೆ ವಂಚನೆ *ಆರ್.ಆರ್.ನಗರದ ಜವರೇಗೌಡನಗರದಲ್ಲಿ ಕೃತ್ಯ

ಬೆಂಗಳೂರು: ಒಡವೆಗಳನ್ನು ಗಿರವಿ ಇಡಿಸಿ ಹಣ ಕೊಡಿಸುವುದಾಗಿ ಹೇಳಿದ ಯುವಕರಿಬ್ಬರು, 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದಾರೆ. ಕಾಸರಗೋಡು ಮೂಲದ ಅಬ್ದುಲ್ಲಾ ವಂಚನೆಗೊಳಗಾದವರು. ಆರೋಪಿಗಳಾದ ತಬ್ರೇಜ್, ರಾಜು ಹಾಗೂ ಮತ್ತೊಬ್ಬನ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಬ್ದುಲ್ಲಾ ಈ ಹಿಂದೆ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದು, ಕರೊನಾ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸ್ ಬಂದಿದ್ದರು. ಬಾಣಸವಾಡಿಯಲ್ಲಿ ಮೀನು ವ್ಯಾಪಾರ ಮಾಡಲು ನಿರ್ಧರಿಸಿದ್ದರು. ಅದಕ್ಕೆ ಹಣ ಕಡಿಮೆಯಾದ್ದರಿಂದ ಪತ್ನಿಯ ಒಡವೆಗಳನ್ನು ಅಡವಿಟ್ಟು ಹಣ ಹೊಂದಿಸಲು ಮುಂದಾಗಿದ್ದರು. ಈ ಸಂಬಂಧ ಗಿರವಿ ಅಂಗಡಿಗೆ ಹೋಗಿದ್ದಾಗ ಸ್ಥಳೀಯ ಗುರುತಿನ ಚೀಟಿ ನೀಡುವಂತೆ ಅಂಗಡಿಯವರು ಕೇಳಿದ್ದರು.

ದುಬೈನಲ್ಲಿ ಪರಿಚಯವಾಗಿದ್ದ ಮಂಗಳೂರು ಮೂಲದ ತಬ್ರೇಜ್​ಗೆ ಕರೆ ಮಾಡಿದ್ದ ಅಬ್ದುಲ್ಲಾ, ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಪರಿಚಯದವ ಮೂಲಕ 5 ಚಿನ್ನದ ಬಳೆಗಳನ್ನು ಗಿರವಿ ಇಡಿಸಿ ಹಣ ಕೊಡಿಸುವಂತೆ ಕೇಳಿಕೊಂಡಿದ್ದರು. ಈ ವೇಳೆ ತಬ್ರೇಜ್, ರಾಜು ಎಂಬಾತನ ಫೋನ್ ನಂಬರ್ ಕೊಟ್ಟು ಆತನನ್ನು ಸಂರ್ಪಸುವಂತೆ ತಿಳಿಸಿದ್ದ. ರಾಜುಗೆ ಕರೆ ಮಾಡಿದಾಗ ಆತ ರಾಜರಾಜೇಶ್ವರಿನಗರಕ್ಕೆ ಬರುವಂತೆ ಸೂಚಿಸಿ ವ್ಯಾಟ್ಸ್​ಆಪ್​ಗೆ ಲೊಕೇಷನ್ ಕಳುಹಿಸಿದ್ದ. ಸೆ.14ರಂದು ಬೆಳಗ್ಗೆ 11.30ರಲ್ಲಿ ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿಗೆ ಅಬ್ದುಲ್ಲಾ ಹೋಗಿದ್ದು, ಈ ವೇಳೆ ರಾಜು ತನ್ನ ಸ್ನೇಹಿತನ ಜತೆ ಅಲ್ಲಿಗೆ ಬಂದಿದ್ದ. ಬಳಿಕ ಜವರೇಗೌಡನಗರದಲ್ಲಿರುವ ಜುವೆಲ್ಲರಿ ಮಳಿಗೆಗೆ ರಾಜು ಕರೆದೊಯ್ದು ಚಿನ್ನದ ಬಳೆಗಳನ್ನು ತೆಗೆದುಕೊಂಡು ಮಳಿಗೆ ಒಳಗೆ ಹೋಗಿದ್ದ.

ಐದು ನಿಮಿಷದ ಬಳಿಕ ಮಳಿಗೆಯಿಂದ ಹೊರಬಂದಿದ್ದ ರಾಜು, ನೀನು ಕೊಟ್ಟಿದ್ದ ಬಳೆಗಳನ್ನು ಅಂಗಡಿಯವರಿಗೆ ಕೊಟ್ಟಿದ್ದೇನೆ. ಬ್ಯಾಂಕಿಗೆ ಹೋಗಿ ಹಣ ತಂದು ಕೊಡುವುದಾಗಿ ಹೇಳಿದ್ದಾರೆ ಎಂದಿದ್ದ. ಈ ವೇಳೆ ಚಿನ್ನದ ಬಳೆಗಳು ರಾಜು ಜೇಬಿನಲ್ಲಿರುವುದು ಕಂಡು ಬಂದಿದ್ದು, ಅನುಮಾನದ ಮೇರೆಗೆ ಆತನನ್ನು ಹಿಡಿದುಕೊಳ್ಳಲು ಮುಂದಾದಾಗ ಸ್ಕೂಟರ್​ನಲ್ಲಿ ಪರಾರಿಯಾಗಿದ್ದಾರೆ ಎಂದು ಅಬ್ದುಲ್ಲಾ ದೂರಿನಲ್ಲಿ ವಿವರಿಸಿದ್ದಾರೆ. ಈ ಸಂಬಂಧ ಜುವೆಲ್ಲರಿ ಮಳಿಗೆ ಸ್ಥಳದಲ್ಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ವಂಚಕರ ಮುಖಚಹರೆ ಸೆರೆಯಾಗಿದ್ದು, ಅದನ್ನು ಆಧರಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.