ಜಿಲ್ಲೆ

ಜೂನ್‌ನಲ್ಲಿ ಸಿಇಟಿ ಪರೀಕ್ಷೆ; ನಾಡಿದ್ದೇ ವೇಳಾಪಟ್ಟಿ ಪ್ರಕಟ

ಬೆಂಗಳೂರು: ನೀಟ್ ಪ್ರಕ್ರಿಯೆ ತಡವಾಗಿದ್ದರಿಂದ 2022ರ ಸಿಇಟಿ ಅರ್ಜಿ ಆಹ್ವಾನ ವಿಳಂಬವಾಗಿದ್ದು, ಮಾ.25ರಂದು ಸಿಇಟಿ ವೇಳಾಪಟ್ಟಿ ಪ್ರಕಟಿಸಲಾಗುವುದು. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ವಿಜಯವಾಣಿಯು ಮಾ.21ರಂದು ‘ಇನ್ನೂ ಪ್ರಕಟವಾಗದ ಕೆ-ಸಿಇಟಿ ವೇಳಾಪಟ್ಟಿ’ ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಕೆ-ಸಿಇಟಿ ವಿಳಂಬದಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಡಕುಂಟಾಗಿದೆ. ವೇಳಾಪಟ್ಟಿ ಯಾವಾಗ? ಪ್ರಕಟವಾಗಲಿದೆ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಸಚಿವ ಅಶ್ವತ್ಥ ನಾರಾಯಣ ಲಿಖಿತ ಉತ್ತರ ನೀಡಿದ್ದು, ಈ ಬಾರಿ ಕರೊನಾ ಹಾಗೂ ನೀಟ್ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಸಿಇಟಿ ಅರ್ಜಿ ಆಹ್ವಾನ ವಿಳಂಬವಾಗಿದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಜನವರಿಯಲ್ಲಿ ಸಿಇಟಿ ಅರ್ಜಿಯನ್ನು ಪ್ರಕಟಿಸಲಾಗುತ್ತಿತ್ತು. ಈ ಬಾರಿ ಮೇ 18ರವರೆಗೆ ವಾರ್ಷಿಕ ಪರೀಕ್ಷೆಯು ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಜೂನ್ ಮೊದಲ ಅಥವಾ ಎರಡನೇ ಬಾರದಲ್ಲಿ ಸಿಇಟಿ ನಡೆಸಲು ಉದ್ದೇಶಿಸಿದ್ದು, ಮಾ.25ರಂದು ವೇಳಾಪಟ್ಟಿ ಪ್ರಕಟಿಸಲಾಗುವುದು. ಏಪ್ರಿಲ್ 2022ರ ಮೊದಲನೇ ವಾರದಲ್ಲಿ ಯುಜಿ- ಸಿಇಟಿ 2022ರ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.