ಬೆಂಗಳೂರು: ನಗರದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಬಿಬಿಎಂಪಿ ಸಹಯೋಗದಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವತಿಯಿಂದ ಸದಾಶಿವನಗರದ ಜನತಾ ಬಜಾರ್ ಕಾಂಪ್ಲೆಕ್ಸ್‌ನ ರಾಮಕೃಷ್ಣ ಹೆಗಡೆ ಸೇವಾ ಕೇಂದ್ರದಲ್ಲಿ ಸ್ಥಾಪಿಸಿರುವ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗಳು ಹಾಗೂ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್‌ಗೆ ಶನಿವಾರ ಚಾಲನೆ ಸಿಕ್ಕಿದೆ.
ವಸಂತನಗರ, ಬಾಪೂಜಿನಗರ, ಅಜಾದ್ ನಗರ, ನಾಗಪ್ಪ ಬ್ಲಾಕ್, ಕಾಮಾಕ್ಷಿಪಾಳ್ಯ, ಕೋಣನಕುಂಟೆ, ಉಪ್ಪಾಳ್ ಉಪನಗರ ಸೇರಿ ರಾಜಧಾನಿಯ 28 ಕಡೆಗಳಲ್ಲಿ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್ ತೆರೆಯಲಾಗಿದೆ. ಇದಕ್ಕಾಗಿ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದ್ದು, ತಜ್ಞ ವೈದ್ಯರು ಆನ್‌ಲೈನ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಥಾಪಿಸಿರುವ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗಳಿಗೆ ಬರುವ ರೋಗಿಗಳ ಜತೆ ನೇರ ಸಮಾಲೋಚನೆ ನಡೆಸಿ ಚಿಕಿತ್ಸೆ ಸೌಲಭ್ಯ ಒದಗಿಸಲಿದ್ದಾರೆ.
ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗಳಲ್ಲಿ ಅತ್ಯಾಧುನಿಕ ಉಪಕರಣಗಳ ಮೂಲಕ ಅನ್‌ಲೈನ್‌ನಲ್ಲಿ ತಜ್ಞ ವೈದ್ಯರು ಹೃದಯ, ಶ್ವಾಸಕೋಶ, ಕಣ್ಣು ಮತ್ತು ಕಿವಿ ಸೇರಿ ಎಲ್ಲ ರೀತಿಯ ರೋಗಿಗಳ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಪ್ರಾಥಮಿಕ ಹಂತದಲ್ಲೇ ಪರಿಣತ ವೈದ್ಯರಿಂದ ಸಲಹೆ ಪಡೆಯಬಹುದು. ಸರದಿ ಸಾಲಿನಲ್ಲಿ ನಿಲ್ಲದೆ ತ್ವರಿತಗತಿಯಲ್ಲಿ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ದೂರದ ಊರುಗಳಲ್ಲಿರುವ ಪರಿಣತ, ತಜ್ಞ ವೈದ್ಯರೂ ಆನ್‌ಲೈನ್ ಮೂಲಕ ವೈದ್ಯಕೀಯ ಸೇವೆ ನೀಡಲಿದ್ದಾರೆ. ರೋಗಿಗಳ ಕೈಗೆಟುಕುವ ರೀತಿಯಲ್ಲಿ ಸೇವೆ ಸಿಗಲಿವೆ. ಇದರಿಂದ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಅಲ್ಲದೆ, ಸರ್ಕಾರದ ಅನಗತ್ಯ ವೆಚ್ಚಕ್ಕೂ ಕಡಿವಾಣ ಬೀಳಲಿದೆ. ಡಿಜಿಟಲ್ ಸ್ಟೆಥೋಸ್ಕೋಪ್, ಡರ್ಮಾಸ್ಕೋಪ್, ಇಎನ್‌ಟಿ ಪರೀಕ್ಷಾ ಕ್ಯಾಮರಾ, ಇಸಿಜಿ, ಸಿಗ್ಮೋಮಾನೋಮೀಟರ್, ಗ್ಲೂಕೋಮೀಟರ್, ಎಕ್ಸ್‌ರೇ ಸ್ಕ್ಯಾನರ್, ಫಂಡಸ್ ರೆಟಿನಾ, ಕಣ್ಣಿನರಿ ಫ್ರಾಕ್ಷನ್ ಘಟಕ, ಎಕ್ಸಾಮಿನೇಷನ್ ಚೇರ್ ಸಾಧನಗಳಿವೆ.
ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ
ಔಷಧ ಚೀಟಿಯೊಂದಿಗೆ ರೋಗಿಯ ಸ್ಥಿತಿ ಆಧರಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಶೇಷ ಆಸ್ಪತ್ರೆಗಳಿಗೆ ಆನ್‌ಲೈನ್‌ನಲ್ಲಿ ಸಲಹೆ ದೊರೆಯಲಿದೆ. ನಾಗರಿಕರ ಅನುಕೂಲಕ್ಕಾಗಿ ivirtualvaidya ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಸುಲಭವಾಗಿ ಚಿಕಿತ್ಸೆ ಪಡೆಯಬಹುದು.
ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ಎಂಡಿ ಕೆ.ಶ್ರೀನಿವಾಸ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ, ವಲಯ ಆಯುಕ್ತ ಡಾ.ಆರ್.ಎಲ್.ದೀಪಕ್ ಮತ್ತಿತರರಿದ್ದರು.
ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗಳು ಹಾಗೂ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್ ಕೇಂದ್ರ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನಗರದಲ್ಲಿ ಇನ್ನಷ್ಟು ಸೂಪರ್ ಸ್ಪೆಷಾಲಿಟಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಿದ್ದೇವೆ. ಇದೆಲ್ಲಾವನ್ನು ನಿರ್ವಹಣೆಗಾಗಿ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯನ್ನು ಒಂದೇ ಸೂರಿನಡಿ ತಂದು ಪ್ರತ್ಯೇಕವಾಗಿ ಬೆಂಗಳೂರು ಹೆಲ್ತ್ ಸಿಸ್ಟಂ ಜಾರಿಗೆ ತರಲಾಗುತ್ತಿದೆ ಎಂದರು.
ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ
ಬೆಂಗಳೂರಿನ ಯಾವುದೇ ಮೂಲೆಯಲ್ಲಿರುವ ರೋಗಿಗಳಿಗೆ ಅತಿ ವೇಗದಲ್ಲಿ ವೈದ್ಯಕೀಯ ಸೇವೆ ಸಿಗಬೇಕೆಂಬ ಮಹದಾಸೆಯಿಂದ ಇದನ್ನು ಆರಂಭಿಸಲಾಗಿದೆ. ಆಧುನಿಕ ವೈದ್ಯಕೀಯ ಉಪಕರಣಗಳಿಂದ ರೋಗಿಗಳ ತಪಾಸಣೆ ನಡೆಯಲಿದೆ. ದಿನದ 24 ಗಂಟೆಯೂ ಇದು ಕಾರ್ಯನಿರ್ವಹಿಸಲಿದ್ದಾರೆ. ಜನಸಂಖ್ಯೆ ಏರಿಕೆಯಾದಂತೆ ಆರೋಗ್ಯ ಕ್ಷೇತ್ರದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಿದೆ. ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ತಮ್ಮ ಕ್ಷೇತ್ರದ ಜನರಿಗೆ ಸುಸಜ್ಜಿತ ಆರೋಗ್ಯ ಸೇವೆ ನೀಡಬೇಕೆಂಬ ಉದ್ದೇಶದಿಂದ ಹಲವು ಕಾರ್ಯಮಾಡುತ್ತಿದ್ದಾರೆ. 240 ನಮ್ಮ ಕ್ಲಿನಿಕ್ ಪೈಕಿ 113 ಪ್ರಾರಂಭವಾಗಿದೆ. ಉಳಿದ ಕ್ಲಿನಿಕ್‌ಗಳನ್ನು ಸದ್ಯದಲ್ಲೇ ಪ್ರಾರಂಭಿಸಲಾಗುತ್ತದೆ. ಇದರಲ್ಲಿಯೂ ವಿವಿಧ ಆರೋಗ್ಯ ಸೇವೆ ಸಿಗಲಿವೆ. ಹೊಸ ಮಾದರಿಯ ತಂತ್ರಜ್ಞಾನದಿಂದ ಸುಲಭವಾಗಿ ಆರೋಗ್ಯ ಸೇವೆ ನೀಡಲು ಸಹಾಯವಾಗಲಿದೆ ಎಂದು ಸಿಎಂ ವಿವರಿಸಿದರು.