ಜಿಲ್ಲೆ

ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟ ಕಾರ್ಮಿಕ

Webdesk - Ravikanth

ಬೆಂಗಳೂರು: ಒಂದೂವರೆ ತಿಂಗಳ ಹಿಂದೆ ಜೀವನೋಪಾಯಕ್ಕೆಂದು ದೂರದ ಊರಿನಿಂದ ಬೆಂಗಳೂರಿಗೆ ಬಂದಿದ್ದ ಕಾರ್ಮಿಕನೊಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕೆಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಚಂದನ ಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ. ಉತ್ತರ ಪ್ರದೇಶ ಮೂಲದ ಮನೋಜ್ ಶರ್ಮಾ ಸಾವಿಗೀಡಾದ ಕಾರ್ಮಿಕ. ಕಾರ್ಪೆಂಟರ್​ ಆಗಿದ್ದ ಈತ ನಿನ್ನೆ ರಾತ್ರಿ ಕೆಲಸ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಕೆಲಸದ ವೇಳೆ ಕಟ್ಟಡದ ಮೇಲಿನಿಂದ ಬಿದ್ದ ಈತನ ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಇದು ಆಕಸ್ಮಿಕ ಸಾವಲ್ಲ ಎಂದು ಸಂಬಂಧಿಕರು ಹೇಳುತ್ತಿದ್ದಾರೆ. ಅಲ್ಲದೆ ನಿನ್ನೆ ರಾತ್ರಿ ಘಟನೆ ನಡೆದಿದ್ದರೂ ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ಪೊಲೀಸರು ಆತನ ತಮ್ಮನಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.