ಹಾವೇರಿ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಹೋದರರಿಬ್ಬರು ಸಾವಿಗೀಡಾಗಿದ್ದು, ಇನ್ನು ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ. ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಕಚವಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಇಲ್ಲಿನ ಮನೆಯೊಂದರಲ್ಲಿ 15 ದಿನಗಳ ಹಿಂದೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಐವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹದಿನೈದು ದಿನಗಳ ಜೀವನ್ಮರಣ ಹೋರಾಟದ ಬಳಿಕ ಇಂದು ಸಹೋದರರಿಬ್ಬರು ಸಾವಿಗೀಡಾಗಿದ್ದಾರೆ. ಚಿದಂಬರ (55) ಹಾಗೂ ಸೀತಾರಾಮ್ (60) ಸಾವಿಗೀಡಾದವರು. ಚಿಂತಾಜನಕ ಪರಿಸ್ಥಿತಿಯಲ್ಲಿರುವ ಇನ್ನು ಮೂವರಿಗೆ ಚಿಕಿತ್ಸೆ ಮುಂದುವರಿದಿದೆ.
ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿ ಮೇಣದಬತ್ತಿ ಹಚ್ಚಿಟ್ಟಿದ್ದರು. ಇದೇ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಗೊಂಡು ದುರಂತ ಸಂಭವಿಸಿತ್ತು. ಹಿರೆಕೇರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.