ಮುದರಂಗಡಿ ಗ್ರಾಮದ ಸಾಚಿತೂರು ಒಳದಿಕ್ಕು ಬಳಿ ನಿರ್ಮಿಸಿರುವ ಅವೈಜ್ಞಾನಿಕ ಕಾಲುಸಂಕ. 
ಜಿಲ್ಲೆ

ಕಾಡುತ್ತಿದೆ ಮದರಂಗಡಿ ಕಾಲುಸಂಕ

Avinash R

-ಹೇಮನಾಥ್ ಪಡುಬಿದ್ರಿ

ಗ್ರಾಮೀಣ ಭಾಗಗಳಲ್ಲಿ ಮಳೆ ನೀರು ಹರಿಯುವ ತೋಡು ದಾಟಲು ಜನರಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ಸಿಮೆಂಟ್ ಕಾಲುಸಂಕ ಕೆಲವೆಡೆ ಅವೈಜ್ಞಾನಿಕವಾಗಿದ್ದು, ಗ್ರಾಮೀಣರು ಸಂಚಾರಕ್ಕೆ ಪರದಾಡುವಂತಾಗಿದೆ.

ಕಾಪು ತಾಲೂಕು ಮುದರಂಗಡಿ ಗ್ರಾಮದ ಸಾಚಿತೂರು ಒಳದಿಕ್ಕು ಶಂಕರ ಶೆಟ್ಟಿ ಮನೆ ಬಳಿ ಸರ್ಕಾರ ನಿರ್ಮಿಸಿರುವ ಸಿಮೆಂಟ್ ಕಾಲುಸಂಕ ಜನರಿಗೆ ಪ್ರಯೋಜನವಾಗುವ ಬದಲು ತೊಂದರೆಯಾಗಿ ಕಾಡುತ್ತಿದೆ.

5 ಲಕ್ಷ ರೂ. ವೆಚ್ಚ

ಕೃಷಿಯನ್ನೇ ಅವಲಂಬಿಸಿರುವ ಒಳದಿಕ್ಕು ಪ್ರದೇಶದ ಸುಮಾರು 8 ಮನೆಗಳಿಗೆ ಅನುಕೂಲವಾಗಿ ಗ್ರಾಮಸ್ಥರ ಬೇಡಿಕೆಯಂತೆ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಶಿಫಾರಸಿನಂತೆ ಲೋಕೋಪಯೋಗಿ ಇಲಾಖೆ ಮೂಲಕ ಕೆಲ ತಿಂಗಳ ಹಿಂದಷ್ಟೇ 5 ಲಕ್ಷ ರೂ. ವೆಚ್ಚದಲ್ಲಿ ಕಾಲುಸಂಕ ನಿರ್ಮಿಸಲಾಗಿದೆ. 2021-22ನೇ ಸಾಲಿನ ತಾಂತ್ರಿಕ ಅನುಮೋದನೆಯೊಂದಿಗೆ ಬ್ರಹ್ಮಾವರ ಹಂದಾಡಿಯ ಗುತ್ತಿಗೆದಾರರೊಬ್ಬರಿಗೆ ಕಾಮಗಾರಿ ವಹಿಸಲಾಗಿತ್ತು. ಕಾಮಗಾರಿ ವೇಳೆ ಸ್ಥಳೀಯರು ಅವೈಜ್ಞಾನಿಕವಾಗಿ ಕಾಲು ಸಂಕ ನಿರ್ಮಿಸುತ್ತಿರುವ ಬಗ್ಗೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಗಮನಕ್ಕೂ ತಂದರೂ, ಅಪ್ರಯೋಜಕ ರೀತಿಯಲ್ಲಿ ಕಾಲುಸಂಕ ನಿರ್ಮಿಸಿದ್ದರು.

ಗ್ರಾಮೀಣರ ಅಸಮಾಧಾನ

ಗ್ರಾಮೀಣ ಭಾಗದಲ್ಲಿರುವ ತೋಡು ದಾಟಿಕೊಳ್ಳಲು ಜನರೇ ಮರದ ಕಾಲು ಸಂಕ ನಿರ್ಮಿಸಿಕೊಳ್ಳುತ್ತಿದ್ದರು. ಇದರಿಂದ ಜನರು ಪ್ರಾಣಾಪಾಯಕ್ಕೆ ಒಳಗಾಗುವುದನ್ನು ತಪ್ಪಿಸಲು ಸರ್ಕಾರವೇ ಕೆಲವೆಡೆ ಸಿಮೆಂಟ್ ಕಾಲು ಸಂಕ ನಿರ್ಮಿಸಿಕೊಟ್ಟಿದೆ. ಆದರೆ, ಪ್ರಸ್ತುತ ಮಳೆಗಾಲದಲ್ಲಿ ಇಲ್ಲಿನ ಜನರಿಗೆ ನಿರ್ಮಿಸಿರುವ ಈ ಕಾಲು ಸಂಕವೇ ಇದೀಗ ಅಪ್ರಯೋಜಕವಾಗಿದೆ. ಕಾಮಗಾರಿ ಮುಗಿದು ಮೊದಲ ಮಳೆಗಾಲದ ಸಂದರ್ಭದಲ್ಲೇ ತೋಡು ದಾಟಿ ಆಚೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮೀಣರು ಅಸಮಾಧಾನಕ್ಕೊಳಗಾಗಿದ್ದಾರೆ.

ತೋಡಿನ ದಿಕ್ಕು ಬದಲಿಸಿದರು!

ಕಾಪು ತಾಲೂಕು ಮುದರಂಗಡಿ ಗ್ರಾಮದ ಈ ಪ್ರದೇಶದಲ್ಲಿರುವ ತೋಡಿನಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಆದರೂ ತೋಡಿನ ಅಗಲವನ್ನು ಕಿರಿದುಗೊಳಿಸಿ ಕಾಮಗಾರಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಈ ಭಾಗದಲ್ಲಿ ನೆರೆಯುಂಟಾಗಿ ಹೊಸ ಕಾಲು ಸಂಕವೇ ಮುಳುಗಡೆಯಾಗಿ ಜನ ಸಂಕಷ್ಟಪಡುವಂತಾಗಿತ್ತು. ತೋಡಿನ ದಿಕ್ಕು ಬದಲಿಸಿ ಕಾಲು ಸಂಕ ನಿರ್ಮಿಸಿದ್ದರಿಂದ ಇನ್ನೊಂದು ಪಾರ್ಶ್ವದಲ್ಲಿ ಕೊರೆತ ಉಂಟಾಗಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇಕ್ಕೆಲಗಳಲ್ಲಿ ಅಸಮರ್ಪಕ ಕಾಮಗಾರಿಯಿಂದಾಗಿ ಜನ ಸಂಚರಿಸದಂತಾಗಿದೆ. ಕಾಲು ಸಂಕ ಇನ್ನಷ್ಟು ಎತ್ತರಿಸಿ, ಅಗಲಗೊಳಿಸಿ ತೋಡಿನ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಬೇಕೆನ್ನುತ್ತಾರೆ ಸ್ಥಳೀಯರು.

ನೆರೆಯ ಪರಿಣಾಮ ಕಾಲುಸಂಕದ ಇನ್ನೊಂದು ಪಾರ್ಶ್ವದಲ್ಲಿರುವ ಮನೆಯವರ ಕೊಟ್ಟಿಗೆಗೆ ನೀರು ನುಗ್ಗಿ ಜಾನುವಾರುಗಳು ತೊಂದರೆಗೆ ಸಿಲುಕಿದ್ದವು. ಅಗಲವಾಗಿ ನೀರು ಹರಿಯುವ ತೋಡಿನಲ್ಲಿ ಯಾವುದೇ ತೊಂದರೆಯಿಲ್ಲದೆ ಈ ಹಿಂದೆ ಸಂಚರಿಸುತ್ತಿದ್ದೆವು. ಆದರೆ, ಇದೀಗ ಸಿಮೆಂಟ್ ಕಾಲು ಸಂಕ ನಿರ್ಮಿಸಿದ್ದರೂ ಅವೈಜ್ಞಾನಿಕ ಕಾಮಗಾರಿಯಿಂದ ನಡೆದು ಹೋಗಲೂ ಆಗದ ಪರಿಸ್ಥಿತಿ ಎದುರಾಗಿದೆ.-ರಮೇಶ ಶೆೆಟ್ಟಿ ಸಾಂತೂರು, ಸ್ಥಳೀಯ ನಿವಾಸಿ
ಹೊಸದಾಗಿ ನಿರ್ಮಸಿರುವ ಕಾಲುಸಂಕದಿಂದ ಸಮಸ್ಯೆ ಆಗಿರುವ ಬಗ್ಗೆ ಯೋಜನೆಯ ಇಂಜಿನಿಯರ್‌ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಮಳೆ ಪ್ರಮಾಣ ಕಡಿಮೆಯಾದ ಕೂಡಲೇ ಸೂಕ್ತ ಕ್ರಮ ವಹಿಸಿ ಸಮಸ್ಯೆ ನಿವಾರಿಸುವಂತೆ ಸಂಬಂಧಿತ ಗುತ್ತಿಗೆದಾರರಿಗೂ ತಿಳಿಸಲಾಗಿದೆ.-ಗಿರೀಶ, ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿ