ಜಿಲ್ಲೆ

ಬಾಲ್ತಿಕುಮೇರು ಜನತೆಗೆ ‘ಸಂಕ’ಷ್ಟ! : ಈಡೇರಿಲ್ಲ ಹಲವು ವರ್ಷಗಳ ಬೇಡಿಕೆ : ಶಾಸಕರ ಮುಂದೆ ಸಂತ್ರಸ್ತರ ಅಳಲು

ಸೌಮ್ಯ ಆರ್

ಶಶಿ ಕುತ್ಯಾಳ ಈಶ್ವರಮಂಗಲ

ಕೆಯ್ಯೂರು ಗ್ರಾಮ ವ್ಯಾಪ್ತಿಯ ಬಾಲ್ತಿಕುಮೇರು ಎಂಬಲ್ಲಿರುವ ಕಿರುಹೊಳೆಗೆ ಸೇತುವೆ (ಸಂಕ) ನಿರ್ಮಾಣ ಬಹುವರ್ಷದ ಬೇಡಿಕೆಯಾಗಿದೆ. ಆದರೆ ಈ ಬೇಡಿಕೆ ಈ ತನಕ ಈಡೇರದೇ ಇರುವುದರಿಂದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ. ಇದೀಗ ಶಾಸಕರು ನೀಡಿರುವ ಭರವಸೆ ಆಶಾವಾದ ಮೂಡಿಸಿದೆ.

ಕೆಯ್ಯೂರು- ಇಳಂತಾಜೆ- ಕೌಡಿಚ್ಚಾರು ರಸ್ತೆಯ ಕಣಿಯಾರು ಬೈಲಿನಿಂದ ಬಾಲ್ತಿಕುಮೇರು- ಓಡಪಲ್ಲ ಮೂಲಕವಾಗಿ ಕೊಳ್ತಿಗೆ ಗ್ರಾಪಂ ವ್ಯಾಪ್ತಿಯ ಪೆರ್ಲಂಪಾಡಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಸಂಪರ್ಕ ರಸ್ತೆಯಲ್ಲಿ ಕಣಿಯಾರು ಸರ್ಕಾರಿ ಶಾಲೆಯಿಂದ ಸ್ವಲ್ಪ ದೂರದ ಅಂತರದಲ್ಲಿ ಕಿರು ಹೊಳೆಯಿದೆ. ಈ ರಸ್ತೆಯ ಅಲ್ಲಲ್ಲಿ ಕೆಲವೊಂದು ಭಾಗ ಕಾಂಕ್ರಿಟೀಕರಣಗೊಂಡಿದ್ದು, ಉಳಿದ ಭಾಗ ಕಚ್ಚಾ ರಸ್ತೆಯಾಗಿದೆ. ಕಚ್ಚಾ ರಸ್ತೆಯ ಭಾಗದಲ್ಲಿರುವ ಕಿರುಹೊಳೆಗೆ ಸೇತುವೆ ನಿರ್ಮಾಣ ಮಾಡಬೇಕೆನ್ನುವುದು ಬಾಲ್ತಿಕುಮೇರು- ಓಡಪಲ್ಲ ಜನತೆಯ ಆಗ್ರಹ.

ಬಾಲ್ತಿಕುಮೇರು- ಓಡಪಲ್ಲದಲ್ಲಿ ಪರಿಶಿಷ್ಟ ಜಾತಿ ಕಾಲನಿ ಸಹಿತ 40 ಮನೆಗಳಿದ್ದು, ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಇಲ್ಲಿನ ಹೊಳೆಯಲ್ಲಿ ನೀರು ತುಂಬಿ ಹರಿಯುವ ವೇಳೆ ರಸ್ತೆ ಸಂಪರ್ಕ ಕಡಿತಕೊಳ್ಳುತ್ತಿದೆ. ಶಾಲೆಗೆ ಹೋಗುವ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಈ ವೇಳೆ ಅಪಾಯ ಎದುರಿಸುವುದು ಅನಿವಾರ್ಯವಾಗಿದೆ. ಉದ್ಯೋಗ, ಕೂಲಿಕೆಲಸಕ್ಕೆ ಹೋಗುವ, ದಿನಸು ಆಹಾರ ವಸ್ತುಗಳ ಖರೀದಿಸಲು ಪೇಟೆಗೆ ಹೋಗುವ ಮಂದಿಗೂ ಸಾಹಸ ತಪ್ಪಿದ್ದಲ್ಲ.

ಶಿಥಿಲಗೊಂಡ ಕಾಲುಸಂಕ

ಈ ಹೊಳೆಯ ಭಾಗದ ಪಕ್ಕದಲ್ಲೇ ಕಾಲು ಸಂಕ ಇತ್ತೀಚಿನ ವರ್ಷಗಳಲ್ಲಿ ತೀರಾ ಶಿಥಿಲಾವಸ್ಥೆಯಲ್ಲಿದೆ. ಕಾಲುಸಂಕದ ಪಾರ್ಶ್ವ ಕುಸಿದು ಬಿರುಕುಬಿಟ್ಟಿದೆ. ಹಾಗಾಗಿ ಇಲ್ಲಿನ ಮಂದಿಗಿದ್ದ ಪರ್ಯಾಯ ವ್ಯವಸ್ಥೆಯೂ ಉಪಯೋಗಕ್ಕಿಲ್ಲದಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಬಳಕೆಗೆ ಬರುತ್ತಿದ್ದ ಕಾಲು ಸಂಕವೂ ಅಪಾಯಕಾರಿ ಸ್ಥಿತಿಗೆ ತಲುಪಿರುವುದು ಇಲ್ಲಿನ ಮಂದಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ರೈ ಮುಂದೆ ಗ್ರಾಮಸ್ಥರ ಅಳಲು...

ಕಣಿಯಾರು ಸರ್ಕಾರಿ ಶಾಲೆಯಲ್ಲಿ ಶನಿವಾರ ನಡೆದ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ, ಕಳೆದ 15 ವರ್ಷಗಳಿಂದ ಶಾಸಕರಿಗೆ, ಸಂಸದರಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಯಾರೂ ನಮ್ಮ ಮನವಿಗೆ ಸ್ಪಂದನೆ ನೀಡಿಲ್ಲ. ಎಂದು ಶಾಸಕರ ಮುಂದೆ ಅಲವತ್ತುಕೊಂಡ ಗ್ರಾಮಸ್ಥರು ಈ ಬಾರಿಯಾದರೂ ನಮ್ಮ ಬೇಡಿಕೆಯನ್ನು ಈಡೇರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಶಾಸಕರ ಭರವಸೆ

ಗ್ರಾಮಸ್ಥರ ಮನವಿ ಸ್ವೀಕರಿಸಿರುವ ಶಾಸಕ ಅಶೋಕ್ ಕುಮಾರ್ ರೈ ಕಿರುಹೊಳೆಗೆ ಸೇತುವೆ ನಿರ್ಮಾಣವಾಗಬೇಕಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಸೇತುವೆ ಅಗತ್ಯವಾಗಿ ಆಗಬೇಕಿದೆ. 6 ತಿಂಗಳೊಳಗಾಗಿ ಇಲ್ಲಿ ಸೇತುವೆ ನಿರ್ಮಾಣ ಮಾಡಿಕೊಡುವ ಮೂಲಕ ಈ ಭಾಗದ ಗ್ರಾಮಸ್ಥರ ನೋವಿಗೆ ಸ್ಪಂದಿಸುತ್ತೇನೆ ಎಂದು ಶಾಸಕರು ಸಂತೈಸಿದ್ದಾರೆ.

ಕಿರುಹೊಳೆ ಪಕ್ಕದಲ್ಲಿದ್ದ ಕಾಲು ಸಂಕವೂ ಶಿಥಿಲಗೊಂಡ ಅಪಾಯಕಾರಿ ಸ್ಥಿತಿಯಲ್ಲಿರುವುದರಿಂದ ಮಳೆಗಾಲದಲ್ಲಿ ಬಾಲ್ತಿಕುಮೇರು- ಓಡಪಲ್ಲ ಭಾಗದ ಸುಮಾರು 40 ಮನೆಯವರು ಸಂಪರ್ಕ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಇದೀಗ ಶಾಸಕ ಅಶೋಕ್ ಕುಮಾರ್ ರೈ 50 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದು, ಶ್ರೀದಲ್ಲೇ ಸಮಸ್ಯೆ ಬಗೆಹರಿಯಲಿದೆ. ಬಟ್ಯಪ್ಪ ರೈ ದೇರ್ಲ ಕೆಯ್ಯೂರು ಗ್ರಾಪಂ ಸದಸ್ಯ ಶಾಸಕ ಅಶೋಕ್ ಕುಮಾರ್ ರೈ ನುಡಿದಂತೆ ನಡೆಯುತ್ತಾರೆ. ಇಲ್ಲಿಗೆ ಸೇತುವೆ ನಿರ್ಮಾಣ ಮಾಡಿ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ಹಾಗಾಗಿ ಖಂಡಿತವಾಗಿ ಈ ಬಾರಿ ಇಲ್ಲಿನ ಜನತೆಯ ಬಹುವರ್ಷದ ಬೇಡಿಕೆ ಈಡೇರಲಿದೆ. ಎ.ಕೆ.ಜಯರಾಮ ರೈ ಕಾಂಗ್ರೆಸ್ ಮುಖಂಡ