ಮಂಗಳೂರು: 'ಮರಳು ಅಕ್ರಮ ಸಾಗಾಣಿಕೆಗೆ ದೇವಿಯೇ ಬ್ರೇಕ್ ಹಾಕಿದಳಾ?' ಎಂದು ಅಚ್ಚರಿ ಪಡುವಂಥ ಘಟನೆಯೊಂದು ಬೆಳಕಿಗೆ ಬಂದಿದೆ. ಮಂಗಳೂರು ಹೊರವಲಯದ ದೇವಿಪುರದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಮುಂದೆ ಇಂಥದ್ದೊಂದು ಘಟನೆ ನಡೆದಿದೆ. ಪರಿಣಾಮ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಬ್ರೇಕ್ಫೇಲ್ ಆಗಿ ಪಲ್ಟಿಯಾಗಿ, ಮರಳೆಲ್ಲ ಚೆಲ್ಲಾಪಿಲ್ಲಿ ಆಗಿದೆ.
ಮಂಗಳೂರಿನ ಹೊರವಲಯದ ತಲಪಾಡಿ-ದೇವಿಪುರ ಬಳಿ ಎರಡು ದಿನಗಳ ಹಿಂದೆ ಈ ಪ್ರಕರಣ ನಡೆದಿದ್ದು, ಆ ಕುರಿತ ಸಿಸಿಟಿವಿ ಇದೀಗ ಬಹಿರಂಗಗೊಂಡಿದ್ದು, ಅಂದಿನ ಘಟನಾವಳಿ ದೃಶ್ಯ ಏನೆಂಬುದು ನಿಖರವಾಗಿ ಕಂಡುಬಂದಿದೆ.
ಕೇರಳಕ್ಕೆ ಮರಳು ಸಾಗಿಸುತ್ತಿದ್ದ ಈ ಲಾರಿ ದೇವಿಪುರ ದೇವಸ್ಥಾನ ದಾಟಿ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಬ್ರೇಕ್ಫೇಲ್ ಆಗಿದ್ದು, ಏರುರಸ್ತೆಯಾದ್ದರಿಂದ ಅರ್ಧ ಕಿಲೋಮೀಟರ್ ಹಿಂದಕ್ಕೆ ಹಿಮ್ಮುಖವಾಗಿಯೇ ರಭಸದಿಂದ ಬಂದಿದ್ದು, ತೆಂಗಿನಮರವೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಚೆಕ್ಪೋಸ್ಟ್ ಇದ್ದು, ಅಕ್ರಮವಾಗಿ ಮರಳು ಸಾಗಿಸುವವರು ಅವರ ಕಣ್ಣು ತಪ್ಪಿಸಿ ಹೋಗುವ ಸಲುವಾಗಿ ಹೀಗೆ ಒಳದಾರಿಯಲ್ಲಿ ಸಾಗಿಸುತ್ತಿದ್ದಾರೆ. ಈ ಲಾರಿಯವರು ಕೂಡ ಅಂಥದ್ದೇ ಪ್ರಯತ್ನದಲ್ಲಿದ್ದಾಗ ಹೀಗಾಗಿದೆ ಎನ್ನಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ