More

    ಸೋಷಿಯಲ್ ಮೀಡಿಯಾಕ್ಕೆ ಅಂಕುಶ: ಫಾರ್ವರ್ಡ್ ಸಂದೇಶಗಳ ಮೂಲಕ್ಕೆ ಗಾಳ; ಹೊಸ ಕರಡು ನಿಯಮ ಸಿದ್ಧ

    ನವದೆಹಲಿ: ಸಾಮಾಜಿಕ ಸಭ್ಯತೆ ಮೀರಿ ಸುಳ್ಳು ಮಾಹಿತಿ, ವದಂತಿಗಳನ್ನೂ ಪ್ರಸಾರ ಮಾಡುತ್ತಿರುವ ಗಂಭೀರ ಆರೋಪಕ್ಕೀಡಾಗಿರುವ ಒಟಿಟಿ, ಸೋಷಿಯಲ್ ಹಾಗೂ ಡಿಜಿಟಲ್ ಮೀಡಿಯಾಗಳಿಗೆ ಮೂಗುದಾರ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕರಡು ನಿಯಮಗಳನ್ನು ರೂಪಿಸಿದೆ. ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸುವವರ ಮೂಲವನ್ನು ಕಡ್ಡಾಯವಾಗಿ ಪ್ರಕಟಿಸುವುದೂ ಸೇರಿ ಟಿವಿ ಚಾನಲ್​ಗಳಿಗೆ ಇರುವಂತೆ ಮೂರು ಸ್ತರದ ಸ್ವಯಂ ನಿಯಂತ್ರಣ ಮಾದರಿ ಇದರಲ್ಲಿದೆ. ಇದಕ್ಕಾಗಿ 30 ಪುಟಗಳ ‘ಇನ್​ಫಾಮೇಶನ್ ಟೆಕ್ನಾಲಜಿ(ಗೈಡ್​ಲೈನ್ಸ್ ಫಾರ್ ಇಂಟರ್​ವಿುೕಡಿಯರೀಸ್ ಆಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ರೂಲ್ಸ್ 2021’ ಅನ್ನು ಸರ್ಕಾರ ರೂಪಿಸಿರುವುದಾಗಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಡಿಜಿಟಲ್ ಮೀಡಿಯಾಗಳಿಗೆ ಅನ್ವಯವಾಗುತ್ತದೆ. ಆದರೂ, ಈ ಕಾಯ್ದೆಯ ಸೆಕ್ಷನ್ 87ರ ಪ್ರಕಾರ ನಿಯಮಗಳಲ್ಲಿ ಸ್ಪಷ್ಟತೆ ತರುವ ಉದ್ದೇಶದಿಂದ ಈ ಕರಡು ನಿಯಮಗಳನ್ನು ಸರ್ಕಾರ ರೂಪಿಸಿದೆ. ಇದರ ಪ್ರಕಾರ, ಫೇಸ್​ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳು ಮತ್ತು ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೖೆಮ್ ಮುಂತಾದ ಓವರ್ ದ ಟಾಪ್ (ಒಟಿಟಿ) ಮೀಡಿಯಾಗಳು ಕಂಟೆಂಟ್ ವಿಚಾರದಲ್ಲಿ ಸ್ವಯಂನಿರ್ಬಂಧ ಹೇರಿಕೊಳ್ಳುವುದು ಅವಶ್ಯ. ಸಾಂಪ್ರದಾಯಿಕ ಮಾಧ್ಯಮ ಸಂಸ್ಥೆಗಳಿಗೆ ಅನ್ವಯವಾಗುವ ಚಾಲ್ತಿಯಲ್ಲಿರುವ ನಿಯಮಗಳು ಈ ಮಾಧ್ಯಮಗಳಿಗೆ ಲಾಗೂ ಆಗುವುದಿಲ್ಲ.

    ಈ ಪೈಕಿ ಕೆಲವು ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಧಾರ್ವಿುಕ ಭಾವನೆಗಳಿಗೆ ಧಕ್ಕೆ ತರುವ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಕಂಟೆಂಟ್​ಗಳನ್ನು ಪರಿಷ್ಕರಿಸದೆ ಹಸಿಹಸಿಯಾಗೇ ಪ್ರಸಾರ ಮಾಡುತ್ತಿವೆ. ಇದಕ್ಕೆ ನಿಯಂತ್ರಣ ಹೇರಲು ಈಗಾಗಲೇ ಇರುವ ನಿಯಮಗಳಲ್ಲಿ ಸ್ಪಷ್ಟತೆ ಮೂಡಿಸುವ ಸಲುವಾಗಿ ಕರಡು ನಿಯಮ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಹೀಗಿರುತ್ತದೆ ರೇಟಿಂಗ್

    ಸೆನ್ಸಾರ್​ಷಿಪ್ ಮಾದರಿಯ ಈ ಕರಡು ನೀತಿಯ ಪ್ರಕಾರ, ಒಟಿಟಿ ವೇದಿಕೆಗಳು ತಾವು ಪ್ರಸಾರ ಮಾಡುವ ಕಂಟೆಂಟ್​ಗಳಿಗೆ ರೇಟಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು. ಇದರಂತೆ, ಪ್ರತಿಯೊಂದು ಕಂಟೆಂಟ್ ಅನ್ನೂ ಯಾರು ವೀಕ್ಷಿಸಬಹುದು ಎಂಬುದನ್ನು ಗುರುತಿಸಲು ಸಾಧ್ಯವಾಗುವಂತೆ ಯೂನಿವರ್ಸಲ್ (ಯು) ರೇಟಿಂಗ್ ಅಥವಾ ಅಡಲ್ಟ್ (ಎ) ರೇಟಿಂಗ್ ನೀಡುವುದು ಅವಶ್ಯ. ಇದರ ವಿಧಗಳು ಹೀಗಿವೆ – ಯು/ಎ ಸೆವೆನ್ ಪ್ಲಸ್ (ಏಳು ವರ್ಷ ಮೇಲ್ಪಟ್ಟವರ ವೀಕ್ಷಣೆಗೆ), ಯು/ಎ ಥರ್ಟೀನ್ ಪ್ಲಸ್ (13 ವರ್ಷ ಮೇಲ್ಪಟ್ಟವರ ವೀಕ್ಷಣೆಗೆ), ಯು/ಎ ಸಿಕ್ಸ್​ಟೀನ್ ಪ್ಲಸ್ (16 ವರ್ಷ ಮೇಲ್ಪಟ್ಟವರ ವೀಕ್ಷಣೆಗೆ) ಅಡಲ್ಟ್ (ಎ) (18 ವರ್ಷ ಮೇಲ್ಪಟ್ಟವರ ವೀಕ್ಷಣೆಗೆ) ಎಂದು ಎಲ್ಲರಿಗೂ ಕಾಣಿಸುವಂತೆ ಕಂಟೆಂಟ್ ಮೇಲೆ ನಮೂದಿಸಬೇಕಾಗುತ್ತದೆ.

    ಕರಡು ನಿಯಮಕ್ಕೆ ವಿರೋಧ

    ಡಿಜಿಟಲ್ ಮೀಡಿಯಾದ ಸ್ವಯಂ ನಿಯಂತ್ರಕ ಕರಡು ನೀತಿ ಸಂಹಿತೆಯನ್ನು ಸರ್ಕಾರ ಈಗ ಪ್ರಕಟಿಸಬಾರದು. ಆ ಕರಡು ನಿಯಮಗಳ ಮೇಲೆ ಸಾರ್ವಜನಿಕ ಅಭಿಪ್ರಾಯ ಸ್ವೀಕರಿಸುವುದಕ್ಕೆ ಇದು ಸಕಾಲವಲ್ಲ. ಡೇಟಾ ಸಂರಕ್ಷಣೆ ಕುರಿತು ಸಾರ್ವಜನಿಕ ಅಭಿಪ್ರಾಯ ಸ್ವೀಕರಿಸಲು ಅಡ್ಡಿ ಇಲ್ಲ. ಒಟಿಟಿ ನಿಯಂತ್ರಣಕ್ಕೆ ಸಂಬಂಧಿಸಿ ಈ ಕ್ಷೇತ್ರವೇ ಸ್ವಯಂ ನಿಯಂತ್ರಣ ಮಾನದಂಡಗಳನ್ನು ಸಿದ್ಧಪಡಿಸುತ್ತಿದೆ. ಅದನ್ನು ಸರ್ಕಾರ ಪರಿಗಣಿಸಬೇಕು ಎಂದು ಇಂಟರ್​ನೆಟ್ ಆಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಎಐ) ಆಗ್ರಹಿಸಿದೆ.

    ನಿಯಮ ಜಾರಿಯಾದರೆ…

    ಕರಡು ನಿಯಮ ಜಾರಿಗೆ ಬಂದರೆ ಕೇಬಲ್ ಟೇಬಲ್ ಟೆಲಿವಿಷನ್ ನೆಟ್​ವರ್ಕ್ ರೆಗ್ಯುಲೇಶನ್ ಆಕ್ಟ್, ಪ್ರೆಸ್ ಕೌನ್ಸಿಲ್ ಆಕ್ಟ್ ಮತ್ತು ಕಂಟೆಂಟ್​ಗೆ ಸಂಬಂಧಿಸಿದ ಇತರ ಎಲ್ಲ ಕಾನೂನುಗಳು ಕೂಡ ಸೋಷಿಯಲ್ ಮೀಡಿಯಾ, ಒಟಿಟಿ ಸೇರಿ ಡಿಜಿಟಲ್ ಮೀಡಿಯಾಗಳಿಗೆ ಅನ್ವಯವಾಗಲಿದೆ. ಸದ್ಯ ಇವೆಲ್ಲ ಸಾಂಪ್ರದಾಯಿಕ ಮಾಧ್ಯಮಗಳಾದ ಸುದ್ದಿಪತ್ರಿಕೆ, ನಿಯತಕಾಲಿಕೆ ಮತ್ತು ಟೆಲಿವಿಷನ್​ಗಳಿಗೆ ಮಾತ್ರ ಅನ್ವಯವಿದೆ.

    ಅಹವಾಲು ಪರಿಹಾರಕ್ಕೆ ಗಡುವು: ಯಾವುದೇ ರೀತಿಯಲ್ಲಿ ಕಂಟೆಂಟ್ ಅಥವಾ ಇನ್ನಾವುದೇ ದೂರು, ಅಹವಾಲುಗಳನ್ನು ಸ್ವೀಕರಿಸಿದ 24 ಗಂಟೆಯೊಳಗೆ ಅವುಗಳನ್ನು ಪರಿಹರಿಸಬೇಕು. ಇನ್ನು ಕೆಲವನ್ನು 15 ದಿನಗಳ ಒಳಗೆ ಬಗೆಹರಿಸಿ ಹಿಮ್ಮಾಹಿತಿಯನ್ನು ದೂರುದಾರನಿಗೆ ನೀಡಬೇಕು.

    ಕಂಟೆಂಟ್ ನಿಯಂತ್ರಣಕ್ಕೂ ವ್ಯವಸ್ಥೆ: ಒಟಿಟಿ ವೇದಿಕೆಗಳು ಮುಂದೆ ಕಂಟೆಂಟ್ ನಿಯಂತ್ರಣಕ್ಕೂ ವ್ಯವಸ್ಥೆ ಒದಗಿಸಬೇಕಾಗುತ್ತದೆ. ಇದರಂತೆ, 13 ವರ್ಷ ಮೇಲ್ಪಟ್ಟವರು ವೀಕ್ಷಿಸಬಹುದಾದ ಕಂಟೆಂಟ್​ಗಳಿಗೆ ಪೇರೆಂಟಲ್ ಲಾಕ್ ಒದಗಿಸಬೇಕು. ಇದೇ ರೀತಿ ವಯೋ ನಿಯಂತ್ರಕ ವ್ಯವಸ್ಥೆಯನ್ನೂ ಅಳವಡಿಸಬೇಕಾಗುತ್ತದೆ.

    ವಿಷಯ ವರ್ಗೀಕರಣ ಅಗತ್ಯ: ಸಂದರ್ಭ, ಥೀಮ್ ಭಾವ ಮತ್ತು ಪರಿಣಾಮ ಹಾಗೂ ಟಾರ್ಗೆಟ್ ವೀಕ್ಷಕರಿಗೆ ಅನುಗುಣವಾಗಿ ಕಂಟೆಂಟ್​ಗಳನ್ನು ವರ್ಗೀಕರಿಸಬೇಕಾದ್ದು ಕಡ್ಡಾಯವಾಗಲಿದೆ. ಡ್ರಗ್ ದುರ್ಬಳಕೆ, ಹಿಂಸೆ, ಸೆಕ್ಸ್, ಜನಾಂಗೀಯ ಅಥವಾ ಕೋಮು ಪ್ರಚೋದಕ ವಿಚಾರಗಳು ಮುಂತಾದ ಸೂಕ್ಷ್ಮ ಥೀಮ್ಳನ್ನು ನಿಭಾಯಿಸುವ ಹೊಣೆಯೂ ಒಟಿಟಿ ವೇದಿಕೆಗಳ ಹೆಗಲೇರಲಿವೆ.

    ಬಹಿರಂಗವಾಗಲಿದೆ ಸಂದೇಶದ ಮೂಲ: ಕರಡು ನಿಯಮಗಳ ಪ್ರಕಾರ ಯಾವುದೇ ಕಮ್ಯೂನಿಕೇಶನ್ ಕಂಪನಿಗಳು ಸಂದೇಶ ಮೂಲವನ್ನು ಪ್ರಕಟಿಸುವುದು ಕಡ್ಡಾಯವಾಗಲಿದೆ. ಇದರಿಂದ ಫಾರ್ವರ್ಡ್ ಮೆಸೇಜ್​ಗಳ ಮೂಲ ಯಾವುದು ಅಥವಾ ಬರೆದವರು ಯಾರು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ.

    ಮೂರು ಸ್ತರದ ಸ್ವಯಂ ನಿಯಂತ್ರಣ

    • ಸ್ವಯಂ ನಿಯಂತ್ರಣ ವ್ಯವಸ್ಥೆ – ಸೋಷಿಯಲ್ ಮೀಡಿಯಾ, ಒಟಿಟಿ ಮತ್ತು ಇತರ ಡಿಜಿಟಲ್ ಮೀಡಿಯಾ ವೇದಿಕೆಗಳು ಕುಂದುಕೊರತೆ ಪರಿಹಾರ ವ್ಯವಸ್ಥೆಯ ವಿಭಾಗವನ್ನು ಸ್ಥಾಪಿಸಬೇಕು. ಇದಕ್ಕೆ ಒಬ್ಬ ಅಧಿಕಾರಿಯನ್ನೂ ನೇಮಕ ಮಾಡಿ, ಆತನ ಹೆಸರು, ಸಂಪರ್ಕ ವಿವರಗಳೆಲ್ಲವೂ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು.
    • ಸ್ವಯಂ ನಿಯಂತ್ರಣ ಸಂಸ್ಥೆ/ಮಂಡಳಿ- ಸ್ವಯಂ ನಿಯಂತ್ರಣ ವ್ಯವಸ್ಥೆಗೆ ಪೂರಕವಾಗಿ ಕುಂದುಕೊರತೆ ಪರಿಹಾರಕ್ಕೆ ಸ್ವಯಂ ನಿಯಂತ್ರಣ ಸಂಸ್ಥೆ/ಮಂಡಳಿಯ ಸ್ಥಾಪನೆಯಾಗಬೇಕು. ಇದಕ್ಕೆ ಸುಪ್ರೀಂಕೋರ್ಟ್/ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಮುಖ್ಯಸ್ಥರಾಗಿರಬೇಕು. ದೂರುದಾರನ ಅಹವಾಲನ್ನು ಸ್ವಯಂ ನಿಯಂತ್ರಣ ವ್ಯವಸ್ಥೆ ಸಮರ್ಪಕವಾಗಿ ಪರಿಹರಿಸದೇ ಹೋದರೆ ಈ ಸಂಸ್ಥೆ/ಮಂಡಳಿಗೆ ಮೇಲ್ಮನವಿ ಸಲ್ಲಿಸಬಹುದು.
    • ಸರ್ಕಾರದಿಂದ ಮೇಲ್ವಿಚಾರಣಾ ವ್ಯವಸ್ಥೆ – ಸ್ವಯಂ ನಿಯಂತ್ರಣಾ ವ್ಯವಸ್ಥೆಯ ಮೂರನೇ ಸ್ತರದಲ್ಲಿ ಸರ್ಕಾರದ ಮೇಲ್ವಿಚಾರಣಾ ವ್ಯವಸ್ಥೆ ಇರಲಿದೆ. ಇದು ಅಂತರ್ ಸಚಿವಾಲಯ ಸಮಿತಿಯಾಗಿದ್ದು, ನೀತಿಗಳ ಪರಿಣಾಮಕಾರಿ ಅನುಷ್ಠಾನವನ್ನು ಖಾತರಿಗೊಳಿಸುವ ಹೊಣೆಗಾರಿಕೆ ಹೊಂದಿದೆ. ಇದು ಈ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿರಲಿದ್ದು, ನಿಯಂತ್ರಣ ಚೌಕಟ್ಟುಗಳ ಮೇಲೆ ನಿಗಾವಹಿಸಲಿದೆ. ಈ ಸಮಿತಿಯಲ್ಲಿ ಮಾಹಿತಿ ತಂತ್ರಜ್ಞಾನ, ಮಾಹಿತಿ ಮತ್ತು ಪ್ರಸಾರ, ಗೃಹ, ಕಾನೂನು, ವಿದೇಶಾಂಗ ವ್ಯವಹಾರ, ರಕ್ಷಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳು ಸದಸ್ಯರಾಗಿರಲಿದ್ದಾರೆ. 

    ಮುಂದಿನ ಪ್ರಕ್ರಿಯೆ: ಕರಡು ಪ್ರತಿಯ ಅಧಿಕೃತ ಪ್ರಕಟಣೆಗೂ ಮುನ್ನ ಕೆಲವು ಮಾಧ್ಯಮಗಳಿಗೆ ಲಭಿಸಿರುವ ಕಾರಣ ಮಾಹಿತಿ ಬಹಿರಂಗವಾಗಿದೆ. ಹೀಗಾಗಿ ಕರಡು ಅಧಿಕೃತವಾಗಿ ಪ್ರಕಟವಾದ ಬಳಿಕ ಸಾರ್ವಜನಿಕರು ಮತ್ತು ಸಂಬಂಧ ಪಟ್ಟ ಪಾಲುದಾರರ ಸಲಹೆ, ಸೂಚನೆ ಪಡೆದು ಪರಿಷ್ಕರಿಸುವ ಸಾಧ್ಯತೆ ಇದೆ.

    ನಿಯಮಕ್ಕೆ ಕಾರಣ?

    • ಟ್ವಿಟರ್, ಫೇಸ್​ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮ ಮೀರಿ ವರ್ತಿಸುತ್ತಿರುವುದು (ಕೆಂಪುಕೋಟೆ ಹಿಂಸಾಚಾರ ಪ್ರಕರಣದ ಸಂದರ್ಭದಲ್ಲಿ ಟ್ವಿಟರ್ ನಡೆದುಕೊಂಡ ರೀತಿ)
    • ಒಟಿಟಿ ವೇದಿಕೆಗಳು ಧಾರ್ವಿುಕ ಭಾವನೆಗಳಿಗೆ, ರಾಷ್ಟ್ರೀಯ ಸುರಕ್ಷತೆ ಮತ್ತು ಇತರ ವಿಚಾರಗಳಿಗೆ ಬೆಲೆ ಕೊಡದೆ ಪ್ರಚೋದನಾತ್ಮಕ ಕಂಟೆಂಟ್​ಗಳನ್ನು ಸಹ ಪ್ರಸಾರ ಮಾಡುತ್ತಿರುವುದು. (ಇತ್ತೀಚೆಗೆ ಕೆಲವು ವೆಬ್​ಸಿರೀಸ್​ಗಳ ಬಗ್ಗೆ ವಿವಾದ ಉಂಟಾಗಿತ್ತು)
    • ಸಾಂಪ್ರದಾಯಿಕ ಮಾಧ್ಯಮಗಳಾದ ಮುದ್ರಣ ಮಾಧ್ಯಮ, ಟೆಲಿವಿಷನ್ ಮಾಧ್ಯಮಗಳಿಗೆ ಇರುವಂತಹ ನಿಯಂತ್ರಣ ಇವುಗಳಿಗೆ ಇಲ್ಲದಿರುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts