ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಜ್ಞಾನ ಸಂಪಾದನೆಯೊಂದಿಗೆ ಲೌಕಿಕ ಶಿಕ್ಷಣ, ಆಧ್ಯಾತ್ಮಿಕ ಅನುಭವ ಪಡೆದು ಸಮಾಜದಲ್ಲಿ ಸುಧಾರಣೆ ಮಾಡಿದ ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಹೇಳಿದರು.
ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 171ನೇ ಜನ್ಮದಿನಾಚರಣೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಜಗತ್ತಿಗೆ ಧಾರ್ಮಿಕ ಮಾದರಿಯನ್ನು ತೋರಿಸಿಕೊಟ್ಟವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಭಾರತವನ್ನು ದಕ್ಷಿಣದ ಪಾಕಿಸ್ತಾನ ಆಗುವುದನ್ನು ತಡೆದವರು ಎಂದರು.
ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಗೋಕರ್ಣ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಜೈರಾಜ್ ಕುದ್ರೋಳಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್., ಕೋಶಾಧಿಕಾರಿ ಸುನೀಲ್ ಎನ್.ಕುಂದರ್, ಲೆಕ್ಕ ಪರಿಶೋಧಕ ಪ್ರಶಾಂತ್ ಕೋಟ್ಯಾನ್, ಮಹಿಳಾ ಸಮಿತಿ ಅಧ್ಯಕ್ಷೆ ರಾಗಿಣಿ ಮಾಧವ, ಯುವವಾಹಿನಿ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಹಾಗೂ 33 ಗ್ರಾಮಗಳ ಬಿಲ್ಲವ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಭಜನೆ, ಗುರುಪೂಜೆ, ಮಹಾಪೂಜೆ, ಮಧ್ಯಾಹ್ನದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಅಕ್ಷರ ಪುರಸ್ಕಾರ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸತೀಶ್ಚಂದ್ರ ಇರುವೈಲ್ ಸೂರಜ್, ನಾಗರಾಜ್ ಅಂಚನ್ ಬಜಾಲ್ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ಪ್ರಾರ್ಥನಾ ಕೀರ್ತಿ, ದಿಯಾಶ್ರೀ, ರಿತಿಕ್ ಅವರಿಗೆ ಅಕ್ಷರ ಪುರಸ್ಕಾರ ನೀಡಲಾಯಿತು.
ಸಮಾಜದಲ್ಲಿ ಮೇಲೆ ಬರಬೇಕು ಎಂದು ಆಶಿಸುವ ಯುವ ಸಮುದಾಯಕ್ಕೆ ಸಂಘ ಶಕ್ತಿಯಾಗಬೇಕು. ಅಂತಹ ಯುವಕರಿಗೆ ಉದ್ಯೋಗ, ಉದ್ಯಮಕ್ಕೆ ಸಹಕಾರ ನೀಡಿದಾಗ ಯುವಕರು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಡಾ.ಯೋಗೀಶ್ ಕೈರೋಡಿ ಪ್ರಾಧ್ಯಾಪಕ