

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ರಾಜ್ಯಾದ್ಯಂತ ಗ್ರಾಮೀಣ ಶಾಲೆಗಳ ಶಿಕ್ಷಕರ ಕೊರತೆ ಗಮನಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಂತೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 1,074 ಶಾಲೆಗಳಿಗೆ ಸಂಸ್ಥೆ ವತಿಯಿಂದ ಜ್ಞಾನದೀಪ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ ಎಂದು ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ತಿಳಿಸಿದ್ದಾರೆ.
ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ಈವರೆಗೆ ಒಟ್ಟು 73.07 ಕೋಟಿ ರೂ. ಸಹಾಯಧನ ನೀಡಲಾಗಿದೆ. ಸರ್ಕಾರಿ ಹಾಗೂ ಆಯ್ದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತ ಗಮನಿಸಿ ತೀರಾ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನಿಯೋಜನೆ ಮಾಡಲಾಗುತ್ತಿದೆ. ಈ ಶಿಕ್ಷಕರಿಗೆ ಮಾಸಿಕ ಗೌರವಧನವಾಗಿ ಈವರೆಗೆ ಒಟ್ಟು 29 ಕೋಟಿ ರೂ.ಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯಿಂದ ವಿನಿಯೋಗಿಸಿದ್ದಾರೆ. ಜ್ಞಾನದೀಪ ಶಿಕ್ಷಕರ ಮೂಲಕ ವಿದ್ಯಾಭ್ಯಾಸದ ಮಧ್ಯದಲ್ಲಿ ಶಾಲೆ ಬಿಟ್ಟ 6ರಿಂದ 14 ವರ್ಷದ ಮಕ್ಕಳ ಮನೆ ಸಂದರ್ಶಿಸಿ, ಅವರ ಮನವೊಲಿಸಿ ಅವರನ್ನು ಮತ್ತೆ ಶಾಲೆಗೆ ಸೇರ್ಪಡೆಗೊಳಿಸಲು ಶ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಶಿಕ್ಷಕರ ತೀವ್ರ ಕೊರತೆಯಿರುವ ವಿವಿಧ ಗ್ರಾಮೀಣ ಶಾಲೆಗಳಿಗೆ ಶೈಕ್ಷಣಿಕ ವರ್ಷ 2025-26ರಲ್ಲಿ 1,074 ಜ್ಞಾನದೀಪ ಗೌರವ ಶಿಕ್ಷಕರನ್ನು ಯೋಜನೆಯಿಂದ ನೇಮಕ ಮಾಡಲಾಗಿದೆ. 1,074 ಶಾಲೆಗಳ ಪೈಕಿ 275 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿರುವುದು ಉಲ್ಲೇಖನೀಯ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಶಿಕ್ಷಕರು ಆಯಾ ಶಾಲೆಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಲಿದ್ದಾರೆ ಎಂದು ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.