ಜಿಲ್ಲೆ

ಮಹಾಕಾಲೇಶ್ವರನ ಪ್ರತಿಷ್ಠಾಪನೆಗೆ ಕ್ಷಣಗಣನೆ :23 ಅಡಿ ಎತ್ತರದ ಮೂರ್ತಿ : ಬ್ರಹ್ಮಕಲಶದ ಬಳಿಕ ಭಕ್ತರಿಂದ ಶಿವನ ವಿಗ್ರಹಕ್ಕೆ ಪೂಜೆ

ಸೌಮ್ಯ ಆರ್

ಧನಂಜಯ ಗುರುಪುರ

ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಗೋಳಿದಡಿಗುತ್ತಿನ ಮನೆಗೆ ಹತ್ತಿರದಲ್ಲಿ ಫಲ್ಗುಣಿ ನದಿ ತಟದಲ್ಲಿ ತಲೆ ಎತ್ತಿದ ಶ್ರೀ ಮಹಾಕಾಲೇಶ್ವರನ ಬೃಹತ್ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆಗೆ ಕ್ಷಣಗಣನೆ ಮುಂದುವರಿದಿದ್ದು, ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶ ಸಂಭ್ರಮ ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ.

ನದಿ ದಂಡೆಯಲ್ಲಿ ಎರಡು ಎಕರೆ ಭೂಪ್ರದೇಶದ ಬಯಲು ಆಲಯದಲ್ಲಿ 22 ಅಡಿ ಎತ್ತರದ ಪದ್ಮಪೀಠದ ಮೇಲೆ 23 ಅಡಿ ಎತ್ತರದ ಶ್ರೀ ಮಹಾಕಾಲೇಶ್ವರನ ವಿಶಿಷ್ಟ ಶಿಲಾಮೂರ್ತಿ ನಿಲ್ಲಿಸಲಾಗಿದೆ. ಇದು ದಕ್ಷಿಣ ಭಾರತದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತುಳುನಾಡಿನ ಪುರಾತನ ಆಡಳಿತ ಮತ್ತು ನ್ಯಾಯದಾನ ವ್ಯವಸ್ಥೆಯಾಗಿದ್ದ ಗುತ್ತುಗಳ ಪುನರುತ್ಥಾನ ಹಾಗೂ ಗ್ರಾಮೀಣರ ಸಂಸ್ಕೃತಿ, ಆಚಾರ-ವಿಚಾರ ಪ್ರೋತ್ಸಾಹಿಸುವ ಸದುದ್ದೇಶದಿಂದ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ವೇದ ಕೃಷಿಕ, ಬ್ರಹ್ಮಋಷಿ ಕೆ.ಎಸ್.ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ, ಗುರುಪುರ ಗೋಳಿದಡಿಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ನೇತೃತ್ವದಲ್ಲಿ ಗೋಳಿದಡಿಗುತ್ತಿನಲ್ಲಿ ಮೇ 15ರಿಂದ 17ರವರೆಗೆ ಶ್ರೀ ಮಹಾಕಾಲೇಶ್ವರನ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶ ಸಂಭ್ರಮ ಜರುಗಲಿದೆ.

ಮಹಾಕಾಲನ ಆರಾಧನೆ: ಗುತ್ತಿನ ಮನೆಗೆ ಹತ್ತಿರದಲ್ಲಿ ಕೆರೆಯಿದ್ದು, ಶತಮಾನಗಳ ಹಿಂದೆ ಉಜ್ಜೆಯಿನಿಯಿಂದ ಇಲ್ಲಿಗೆ ಬಂದಿದ್ದ ಮಹಾಪುರುಷರೊಬ್ಬರು ಕೆರೆ ಹಾಗೂ ನದಿಗೆ ಹೊಂದಿಕೊಂಡ ಈ ಪವಿತ್ರ ಜಾಗದಲ್ಲಿ ಶ್ರೀ ಮಹಾಕಾಲೇಶ್ವರನ ಮಣ್ಣಿನ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಇಲ್ಲೇ ತಪಸ್ಸು ಆಚರಿಸಿದ್ದರು. 25 ವರ್ಷ ಆರಾಧನೆ ಬಳಿಕ ಅವರು ಇಲ್ಲಿಂದ ಉತ್ತರ ಭಾರತಕ್ಕೆ ತೆರಳಿದ್ದ ಸಂದರ್ಭದಲ್ಲಿ ಗುತ್ತು ಮತ್ತು ಮಠಗಳ ಪ್ರಮುಖರಿಗೆ ಆರಾಧನೆ ಜವಾಬ್ದಾರಿ ವಹಿಸಿದ್ದರು. ಕಾಲನ ಸ್ಥಿತ್ಯಂತರದಿಂದ ಅಂದಿನ ಆ ‘ಸುಕ್ಷೇತ್ರ’ ಕಣ್ಮರೆಯಾಗಿತ್ತು. ಗಡಿಕಾರ ವರ್ಧಮಾನ ಶೆಟ್ಟಿ ಅವರು ಈ ಕೆರೆ ಮುಚ್ಚಲು ಮುಂದಾಗಿದ್ದ ಒಂದು ಸಂದರ್ಭದಲ್ಲಿ ದೈವ ಸಂಕಲ್ಪವೋ ಎಂಬಂತೆ ಗುರು ಶ್ರೀ ನಿತ್ಯಾನಂದರು ಕೆರೆ ಅಭಿವೃದ್ಧಿಗೆ ಸೂಚಿಸಿದಲ್ಲದೆ, ಅದರ ಬದಿಯಲ್ಲೇ ಶ್ರೀ ಮಹಾಕಾಲೇಶ್ವರನ ಮೂರ್ತಿ ಪ್ರತಿಷ್ಠಾಪಿಸಲು ನಿರ್ದೇಶಿಸಿದರು. ಅದರಂತೆ ಮೂರ್ತಿ ತಲೆ ಎತ್ತಿದೆ.

ಮೂರ್ತಿಯ ಕಲ್ಲಿಗೆ ಹುಡುಕಾಟ: ಶಿವನ ಮೂರ್ತಿಗೆ ಯೋಗ್ಯವೆನಿಸಿರುವ ಏಕಶಿಲಾ ಬಂಡೆ ಪತ್ತೆಗಾಗಿ ಸಾವಿರಾರು ಮೈಲು ಹುಡುಕಾಟ ನಡೆಸಲಾಗಿದೆ. ವೇಣೂರಿನ ಕಿರೋಡಿ ಎಂಬಲ್ಲಿನ ಕೃಷಿಕ ಕೃಷ್ಣಪ್ಪ ಪೂಜಾರಿ ಎಂಬುವರ ಜಾಗದಲ್ಲಿ ಬೃಹತ್ ಬಂಡೆ ಸಿಕ್ಕಿದೆ. ಸುಮಾರು 2 ಸಾವಿರ ಟನ್ ಭಾರದ ಬಂಡೆ ಇದಾಗಿದೆ. ಬೆಳ್ತಂಗಡಿ ಮಂಜುಶ್ರೀ ಶಿಲ್ಪಕಲಾ ಶಾಲೆಯಲ್ಲಿ ಕಲ್ಲಿನ ಪ್ರಾಥಮಿಕ ಕೆಲಸ ಮುಗಿಸಿ ಶಿಲ್ಪಿ ವೆಂಕಟೇಶ ಆಚಾರ್ಯರ ಮಾರ್ಗದರ್ಶನದಲ್ಲಿ ಗುರುಪುರಕ್ಕೆ ತರಲಾಗಿತ್ತು. 2023ರ ಫೆ.26ರಂದು ವಗ್ಗದ ಶಿಲ್ಪಿ ಕುಮಾರ ಶರ್ಮ ನೇತೃತ್ವದ ತಂಡ ಕಲ್ಲಿನ ಕೆತ್ತನೆ ಕೆಲಸ ಆರಂಭಿಸಿತ್ತು. ಫೆ.12ರಂದು 22 ಅಡಿ ಎತ್ತರದ ಪದ್ಮಪೀಠದ ಮೂರ್ತಿ ನಿಲ್ಲಿಸಲಾಗಿದೆ.

ತುಳುನಾಡಿನ ದೇವಾಲಯಗಳಲ್ಲಿ ಗರ್ಭಗುಡಿಯೊಳಗಿರುವ ದೇವರಿಗೆ ಭಕ್ತರು ಅರ್ಚಕರ ಮೂಲಕ ಪೂಜೆ ಸಲ್ಲಿಸಲು ಅವಕಾಶವಿದೆ. ಇಲ್ಲಿನ ಬಯಲು ಆಲಯದ ಸುಕ್ಷೇತ್ರದಲ್ಲಿ ಶ್ರೀ ಮಹಾಕಾಲೇಶ್ವರನಿಗೆ ಯಾವುದೇ ಜಾತಿ-ಧರ್ಮ, ಮೇಲು-ಕೀಳು ಎಂಬ ತಾರತಮ್ಯವಿಲ್ಲದೆ, ರಾಷ್ಟ್ರಪ್ರೇಮ ಹೊಂದಿರುವ ಆಸ್ತಿಕರೆಲ್ಲರೂ ನಿರ್ದಿಷ್ಟ ವಸ್ತ್ರ ಸಂಹಿತೆಯೊಂದಿಗೆ ನೇರ ಪೂಜೆ ಸಲ್ಲಿಸಲು ಅವಕಾಶವಿದೆ. ಕರಾವಳಿಯಲ್ಲಿ ಇಂಥ ಪೂಜಾ ಸಂಪ್ರದಾಯ ಇದೇ ಪ್ರಥಮ. ಇದು ಭಕ್ತರ ಭಾಗ್ಯವೂ ಆಗಿದೆ. ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಗೋಳಿದಡಿಗುತ್ತಿನ ಗಡಿಕಾರ