

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಮಂಗಳೂರಿನ ಹೊರವಲಯ ನಾಟೆಕಲ್‌ನಲ್ಲಿರುವ ಕಣಚೂರು ಆಸ್ಪತ್ರೆಯ ವೈದ್ಯರ ತಂಡ ಅತ್ಯಪರೂಪ ಮತ್ತು ಸವಾಲಿನ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಬಾಲಕ ಕೈ ಉಳಿಸಿ ಹೊಸ ಜೀವನ ನೀಡಿದೆ.
ಈ ಬಗ್ಗೆ ಶನಿವಾರ ಆಸ್ಪತ್ರೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ.ಆಸಿಫ್ ಮಾಹಿತಿ ನೀಡಿದರು.
ಚನ್ನರಾಯಪಟ್ಟಣದ 11 ವರ್ಷದ ಬಾಲಕನ ಎಡಕೈ ಫೆ.26ರಂದು ಹುಲ್ಲು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಸಂಪೂರ್ಣ ಹಾನಿಗೊಳಗಾಗಿತ್ತು. ಇಂಥ ಸಂದರ್ಭದಲ್ಲಿ ಕೈ ಕತ್ತರಿಸುವುದೊಂದೇ ಪರಿಹಾರ ಆಗಿರುತ್ತದೆ. ಈ ಬಾಲಕನನ್ನು ಕಣಚೂರು ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯ ಟ್ರಾಮಾ ತಂಡ ಚರ್ಚಿಸಿ ಬಾಲಕನ ಮುಂದಿನ ಭವಿಷ್ಯ ಗಮನದಲ್ಲಿರಿಸಿ ಕೈಕತ್ತರಿಸುವ ಬದಲು ಶಸ್ತ್ರಚಿಕಿತ್ಸೆ ಮೂಲಕ ಮರುಜೀವ ನೀಡುವ ತೀರ್ಮಾನ ಕೈಗೊಂಡಿತು ಎಂದು ತಿಳಿಸಿದರು.
ವಿವಿಧ ಹಂತಗಳಲ್ಲಿ ಪುನರಾವರ್ತಿತ ಶಸ್ತ್ರಚಿಕಿತ್ಸೆ, ರಕ್ತ ವರ್ಗಾವಣೆ, ರಕ್ತಸ್ರಾವದ ತೊಂದರೆ, ಸೆಕ್ಸಿಸ್, ಸ್ನಾಯುಗಳು ಮತ್ತು ಅಂಗಾಂಶಗಳಿಗೆ ಸೋಂಕಿನ ಸಾಧ್ಯತೆ ಹೆಚ್ಚಾಗಿತ್ತು. ಚಿಕಿತ್ಸೆ ಪರಿಣಾಮಗಳ ಬಗ್ಗೆ ಪಾಲಕರಿಗೆ ಮಾಹಿತಿ ನೀಡಿದ ಬಳಿಕ ಒಪ್ಪಿಗೆ ಪಡೆದ ತಜ್ಞರು, ಹಂತ ಹಂತವಾಗಿ ಸಮಸ್ಯೆ ಇದ್ದ ಭಾಗವನ್ನು ತೆಗೆದುಹಾಕುವ ಮೂಲಕ ಬಾಲಕನಿಗೆ ಹೊಸ ಜೀವನದ ಅವಕಾಶ ನೀಡಲಾಗಿದೆ ಎಂದರು.
ಶಸ್ತ್ರ ಚಿಕಿತ್ಸೆ ಸಂದರ್ಭ ಮೂಳೆಚಿಕಿತ್ಸಕರ ತಂಡ, ಮುರಿತಕ್ಕೊಳಗಾದ ಭಾಗ ಗುರುತಿಸಿದ ಬಳಿಕ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ್ದರು. ನಂತರ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರು ತೆರೆದ ಇಂಪ್ಲಾಂಟ್ ಮತ್ತು ಚರ್ಮ ಕಸಿ ಮಾಡಿ ಮೂಳೆಗೆ ಅಲ್ಲೋಮಿನೋಫೊರಾಸಿಕ್ ಫ್ಲಾಪ್ ಕವರ್ ಮಾಡಿ 3 ವಾರಗಳ ಬಳಿಕ ಬೇರ್ಪಡಿಸಿ ಚರ್ಮದ ಕಸಿ ನಡೆಸಿದರು. ಆಂಟಿಮೈಕ್ರೋಬಿಯಲ್ ನಿರ್ವಹಣೆ, ನೋವು ನಿರ್ವಹಣೆ ಮತ್ತು ತಜ್ಞರ ಅನುಸರಣಾ ಆರೈಕೆಯೊಂದಿಗೆ ಯಾವುದೇ ಸೋಂಕು ತಡೆಗಟ್ಟಲು ಬರಡಾದ ವಾತಾವರಣದೊಂದಿಗೆ 8 ವಾರಗಳಲ್ಲಿ ಫಲಿತಾಂಶ ಸಾಧಿಸಿದೆ. 6ರಿಂದ 8 ತಿಂಗಳ ನಂತರ ಮುಂದಿನ ಹಂತದಲ್ಲಿ ಮಣಿಕಟ್ಟು ಮತ್ತು ಬೆರಳಿನ ಚಲನೆ ನಿರಂತರ ಸಕ್ರಿಯಗೊಳಿಸಲು ಶಸ್ತ್ರ ಚಿಕಿತ್ಸೆ ವರ್ಗಾವಣೆ ಕಾರ್ಯವಿಧಾನ ನಡೆಸಲಾಗುತ್ತದೆ. ಈ ಶಸ್ತ್ರ ಚಿಕಿತ್ಸೆಗೆ ಹೊರಗಡೆ 7ರಿಂದ 10 ಲಕ್ಷ ಖರ್ಚಿದ್ದರೆ ಕಣಚೂರು ಆಸ್ಪತ್ರೆಯಲ್ಲಿ 1.90 ಲಕ್ಷ ವೆಚ್ಚದಲ್ಲಿ ಮಾಡಲಾಗಿದೆ ಎಂದರು.
ಕಣಚೂರು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಡೀನ್ ಶಾನವಾಝ್ ಮಣಿಪ್ಪಾಡಿ, ಕೌನ್ಸಿಲ್ ಸದಸ್ಯ ಡಾ.ವೆಂಕಟ್ ಪ್ರಭು, ಅರಿವಳಿಕೆ ತಜ್ಞ ಡಾ.ಅಶ್ವಿನ್, ಆರ್ಥೊಪೇಡಿಕ್ ವಿಭಾಗದ ಡಾ.ಹರಂ ಮಿತ್ತಲ್ ಗೋಷ್ಠಿಯಲ್ಲಿದ್ದರು.
ಕಣಚೂರು ಆಸ್ಪತ್ರೆ ನಿರ್ಮಾಣಗೊಂಡು ಹತ್ತು ವರ್ಷವಾಗಿದ್ದು ಟ್ರಾಮಾದ ನುರಿತ ತಂಡವೇ ಇದೆ. ಅಪಘಾತ ನಡೆದ ಎಂಟು ಗಂಟೆ ಬಳಿಕ ಬಾಲಕನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ತಂಡದ ಪರಿಶ್ರಮದಿಂದ ಯಶಸ್ವೀ ಶಸ್ತ್ರಚಿಕಿತ್ಸೆ ನೀಡಲು ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ದೂರದ ಊರುಗಳಿಂದ ರೋಗಿಗಳು ಬರುತ್ತಿದ್ದು ಆಸ್ಪತ್ರೆ ಹೆಸರು ಪಸರಿಸಿದ್ದನ್ನು ತೋರಿಸುತ್ತದೆ. ಡಾ.ಮೊಹಮ್ಮದ್ ಇಸ್ಮಾಯಿಲ್, ವೈದ್ಯಕೀಯ ವಿಭಾಗ ಮುಖ್ಯಸ್ಥ