ಜಿಲ್ಲೆ

ಜನನಾಂಗದಲ್ಲಿ ಸಿಲುಕಿಕೊಂಡ ಬೋಲ್ಟ್​!

Manikya M

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಮಧ್ಯವಯಸ್ಕನೊಬ್ಬನ ಜನನೇಂದ್ರಿಯದಲ್ಲಿ ಸಿಲುಕಿಕೊಂಡ ಕಬ್ಬಿಣದ ಬೋಲ್ಟನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ತಾಸುಗಳ ಕಾಲ ನಡೆಸಿದ ಕಾರ್ಯಾಚರಣೆಯಿಂದ ಹೊರತೆಗೆದ ಘಟನೆ ಕಾಞಂಗಾಡಿನಲ್ಲಿ ನಡೆದಿದೆ.

ಕೈ ಚೆಲ್ಲಿದ ವೈದ್ಯರು ಹೊರ ತೆಗೆದ ಅಗ್ನಿಶಾಮಕ ದಳ ಸಿಬ್ಬಂದಿ

ಮಾರ್ಚ್​ 25ರಂದು ತಡರಾತ್ರಿ ಕಾಞಂಗಾಡಿನ ಜನರಲ್​ ಆಸ್ಪತ್ರೆಗೆ ವಿಶಿಷ್ಟ ರೀತಿಯ ರೋಗಿಯನ್ನು ಕರೆತರಲಾಗಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಪುರುಷ ಜನನೇಂದ್ರಿಯದಲ್ಲಿ ಬೋಲ್ಟ್​ ಸಿಲುಕಿಕೊಂಡಿರುವುದು ಪತ್ತೆಯಾಗಿದ್ದು, ಹೊರತೆಗೆಯಲು ಶ್ರಮಿಸಿದರೂ ಸಾಧ್ಯವಾಗದಿದ್ದಾಗ ಅಗ್ನಿಶಾಮಕದಳ ಕಚೇರಿಗೆ ಮಾಹಿತಿ ನೀಡಿದ್ದಾರೆ!

ವೈದ್ಯರ ಕರೆಯ ಮೇರೆಗೆ ಅಸ್ಪತ್ರೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಧ್ಯವಯಸ್ಕನ ಸ್ಥಿತಿ ನೋಡಿ ಆತಂಕವೂ ಎದುರಾಗಿತ್ತು. ಬೋಲ್ಟ್​ ಜನನಾಂಗದಲ್ಲಿ ಸಿಲುಕಿ ಕನಿಷ್ಠ ಎರಡು ದಿವಸಗಳಾಗಿರಬೇಕೆಂದು ಸಂಶಯಿಸಲಾಗಿದೆ. ಬೋಲ್ಟ್​ ಸಿಲುಕಿಕೊಂಡ ಪರಿಣಾಮ ಜನನಾಂಗ ದಪ್ಪಗಾದ ಹಿನ್ನೆಲೆಯಲ್ಲಿ ಹೊರತೆಗೆಯಲಾಗದೆ ಮೂತ್ರ ಹೊರಬಾರದ ಸ್ಥಿತಿಯೂ ನಿರ್ಮಾಣವಾಗಿತ್ತು. ಈ ವಿಷಯ ಯಾರಲ್ಲೂ ತಿಳಿಸಲೂ ಆಗದೆ ವ್ಯಕ್ತಿ ಚಡಪಡಿಸಿ ಕೊನೆಗೂ ಆಸ್ಪತ್ರೆ ಧಾವಿಸಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರೂ ಕೈಚೆಲ್ಲಿದಾಗ ಅಗ್ನಿಶಾಮಕ ದಳ ಸಿಬ್ಬಂದಿ ಸಲಕರಣೆಯೊಂದಿಗೆ ವೈದ್ಯರ ಉಪಸ್ಥಿತಿಯಲ್ಲಿ ಬೋಲ್ಟ್​ ತೆರವು ಪ್ರಕ್ರಿಯೆ ಅರಂಭಿಸಿದ್ದಾರೆ. ಬೋಲ್ಟ್​ ತುಂಡರಿಸುವ ಮಧ್ಯೆ ಬಿಸಿಯಾಗದಿರಲು ನಿರಂತರ ನೀರು ಸುರಿಯುತ್ತಾ ಎರಡು ತಾಸುಗಳ ನಂತರ ಜನನಾಂಗದಿಂದ ಬೋಲ್ಟ್​ ಬೇರ್ಪಡಿಸಿದ್ದಾರೆ.

ತಾನು ಮದ್ಯದ ನಶೆಯಲ್ಲಿದ್ದಾಗ ಯಾರೋ ಜನನಾಂಗಕ್ಕೆ ಬೋಲ್ಟ್​ ತುರುಕಿಸಿರುವುದಾಗಿ ವ್ಯಕ್ತಿ ತಿಳಿಸುತ್ತಿದ್ದರೂ, ಇದರ ವಿಶ್ವಾಸಾರ್ಹತೆ ಬಗ್ಗೆ ಖಚಿತವಿಲ್ಲ. ಜನನಾಂಗಕ್ಕೆ ಬೋಲ್ಟ್​ ತುರುಕಿ ಮೈಥುನ ನಡೆಸಿರಬೇಕೆಂದೂ ಸಂಶಯಿಸಲಾಗುತ್ತಿದೆ.

ಅಗ್ನಿಶಾಮಕ ದಳ ಅಧಿಕಾರಿ ಸಿ.ಪಿ ಪವಿತ್ರನ್​ ನೇತೃತ್ವದ ತಂಡ ಅತ್ಯಂತ ಸೂಕ್ಷ್ಮ ರೀತಿಯ ಕಾರ್ಯಾಚರಣೆಯಿಂದ ಪುರುಷ ಜನನಾಂಗದಲ್ಲಿ ಸಿಲುಕಿಕೊಂಡಿದ್ದ ಬೋಲ್ಟ್​ ಕೊನೆಗೂ ಹೊರತೆಗೆದಿದ್ದಾರೆ. ಕಾಸರಗೋಡಿನ ಚರಿತ್ರೆಯಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಈ ಹಿಂದೆ ಮಲಪ್ಪುರಂನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಆ ವ್ಯಕ್ತಿ ಮಾನಸಿಕ ಅಸ್ವಸ್ಥನಗಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.