ಜಿಲ್ಲೆ

ಕಾರು ಸಿಡಿದು ಛಿದ್ರ, ಹೊತ್ತಿ ಉರಿದ ವಾಹನ; ಸುಟ್ಟು ಕರಕಲಾದ ದೇಹ: ಜಿಲೆಟಿನ್​ ಸ್ಫೋಟ ಶಂಕೆ..

ರಾಮನಗರ: ಕಾರೊಂದರಲ್ಲಿ ಸ್ಫೋಟ ಸಂಭವಿಸಿ ಅದು ಛಿದ್ರಗೊಂಡು ಹೊತ್ತಿ ಉರಿದಿದ್ದಲ್ಲದೆ, ಅದರಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಕರಕಲಾಗಿ ಮೃತಪಟ್ಟಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳೆ ಗವಿಮಠದ ಬಳಿ ಈ ಅನಾಹುತ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಛಿದ್ರಗೊಂಡಿದ್ದು, ದೇಹವು ಹೊರಕ್ಕೆ ಬಿದ್ದಿದೆ. ಶವ ಕೂಡ ಛಿದ್ರಗೊಂಡ ಸ್ಥಿತಿಯಲ್ಲಿದ್ದು, ಮೃತಪಟ್ಟವರನ್ನು ಮಹೇಶ್ ಎಂಬುದಾಗಿ ಗುರುತಿಸಲಾಗಿದೆ. ಸಾವಿಗೀಡಾದವರ ಕುರಿತು ನಿಖರವಾದ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಕ್ರಷರ್​​ನಲ್ಲಿ ಕಲ್ಲು ಸ್ಫೋಟ ಮಾಡಲು ಬಳಸುವ ಜಿಲೆಟಿನ್​-ಕೆಮಿಕಲ್ ತೆಗೆದುಕೊಂಡು ಹೋಗುವಾಗ ಈ ಅನಾಹುತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.