ಜಿಲ್ಲೆ

ಸಭಾಪತಿ ವಿರುದ್ದ ಅವಿಶ್ವಾಸ ಮಂಡನೆಗೆ ಸಿದ್ಧತೆ - ಮೇಲ್ಮನೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ?

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಂಬಂಧ ತೀರಾ ಹಳಸುತ್ತಿದ್ದಂತೆ, ಜೆಡಿಎಸ್ ಬಿಜೆಪಿಗೆ ಇನ್ನಷ್ಟು ಹತ್ತಿರವಾಗುವ ಲಕ್ಷಣ ಕಾಣಿಸುತ್ತಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ವಿಧಾನಪರಿಷತ್​ವರೆಗೆ ಹಂತಹಂತವಾಗಿ ಮೈತ್ರಿಗೆ ಭೂಮಿಕೆ ಸಿದ್ಧವಾಗುತ್ತಿದೆ.

ಪ್ರಸ್ತುತ ವಿಧಾನಪರಿಷತ್​ನಲ್ಲಿ ಕಾಂಗ್ರೆಸ್​ನಿಂದ ಸದಸ್ಯರಾಗಿರುವ ಪ್ರತಾಪ್​ಚಂದ್ರ ಶೆಟ್ಟಿ ಸಭಾಪತಿಯಾಗಿದ್ದಾರೆ. ಇತ್ತೀಚೆಗೆ ಪರಿಷತ್​ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತಲ್ಲದೆ, ಪರಿಷತ್​ನಲ್ಲಿ ಅತಿ ದೊಡ್ಡ ಪಕ್ಷವಾಗಿ ಕಾಣಿಸಿಕೊಂಡಿದೆ. ಬಿಜೆಪಿ 31 ಸ್ಥಾನ ಹೊಂದಿದ್ದಾರೆ, ಒಂದು ಪಕ್ಷೇತರ ಸದಸ್ಯ ಬಿಜೆಪಿ ಪರವಾಗಿದ್ದಾರೆ. ಕಾಂಗ್ರೆಸ್ 29 ಮತ್ತು ಜೆಡಿಎಸ್ 14 ಸದಸ್ಯರನ್ನು ಹೊಂದಿದೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಬಿಜೆಪಿಗೆ ಹತ್ತಿರವಾಗುತ್ತಿರುವುದರಿಂದ ಸಭಾಪತಿ ಸ್ಥಾನವನ್ನು ಕಾಂಗ್ರೆಸ್​ನಿಂದ ಕಸಿದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.

ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಬಿಜೆಪಿ ಚರ್ಚೆ ನಡೆಸಿದ್ದು, ಶೀಘ್ರವೇ ಮಂಡನಾ ಪ್ರಕ್ರಿಯೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಂದು ವೇಳೆ ಮತದಾನ ನಡೆದರೆ, ನಿರ್ಣಯದ ವಿರುದ್ಧ 36 ಮತ ಬೀಳುವುದು ಅನುಮಾನ. ಈ ಕಾರಣಕ್ಕೆ ಸಭಾಪತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಸಂಗವೇ ಹೆಚ್ಚಿರುತ್ತದೆ. ಡಿಸೆಂಬರ್​ನಲ್ಲಿ ನಡೆಯಬಹುದಾದ ಅಧಿವೇಶನ ಸಂದರ್ಭದಲ್ಲಿ ಈ ಎಲ್ಲ ಪ್ರಕ್ರಿಯೆ ನಡೆಯಲಿದೆ.

ಯಾರಾಗಬಹುದು ಸಭಾಪತಿ?

ವಿಧಾನಪರಿಷತ್ ಸದಸ್ಯರಾಗಿ, ಮಂತ್ರಿಯಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಹೆಸರು ಸಭಾಪತಿ ಸ್ಥಾನಕ್ಕೆ ಕೇಳಿಬರುತ್ತಿದೆ. ಹಾಲಿ ಡಿಸಿಎಂ ಲಕ್ಷ್ಮಣ ಸವದಿ ವಿಧಾನಪರಿಷತ್​ನಿಂದಲೇ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಪರಿಷತ್​ನಿಂದ ಒಬ್ಬರಿಗಾದರೂ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕೆಂಬ ನಿಯಮ ಪಾಲನೆಯಾದಂತಾಗುತ್ತಿದೆ. ಕೋಟಾ ಅವರನ್ನು ಸಚಿವ ಸ್ಥಾನದಲ್ಲಿ ಕುಳ್ಳಿರಿಸಿದರೆ ಸಂಪುಟದಲ್ಲಿ ಒಂದು ಸ್ಥಾನ ಹೆಚ್ಚಾಗಿ ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ದಕ್ಷಿಣ ಕನ್ನಡಕ್ಕೂ ಪ್ರಾತಿನಿಧ್ಯ ಕೊಟ್ಟಂತಾಗುತ್ತದೆ ಎಂಬ ಲೆಕ್ಕಾಚಾರಗಳೆಲ್ಲ ನಡೆದಿದೆ.