

ನವದೆಹಲಿ: ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ 13ನೇ ಆವೃತ್ತಿಗೆ ಯಶಸ್ವಿಯಾಗಿ ಆತಿಥ್ಯ ವಹಿಸಿದ ಯುಎಇ ಕ್ರಿಕೆಟ್ ಮಂಡಳಿಗೆ ಬಿಸಿಸಿಐ 100 ಕೋಟಿ ರೂ. ಮೊತ್ತವನ್ನು ಪಾವತಿಸಿದೆ ಎಂದು ವರದಿಯಾಗಿದೆ.
ಏಪ್ರಿಲ್-ಮೇನಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ ಟೂರ್ನಿ ಕರೊನಾ ಹಾವಳಿಯಿಂದಾಗಿ ಮುಂದೂಡಲ್ಪಟ್ಟಿತ್ತು. ಬಳಿಕ ಯುಎಇಗೆ ಸ್ಥಳಾಂತರಗೊಂಡಿತ್ತು. ಟೂರ್ನಿ ನಡೆಯದೆ ಹೋಗಿದ್ದರೆ ಬಿಸಿಸಿಐ ಬರೋಬ್ಬರಿ 4 ಸಾವಿರ ಕೋಟಿ ರೂ. ನಷ್ಟ ಅನುಭವಿಸುವ ಭೀತಿ ಎದುರಿಸಿತ್ತು.
ಯುಎಇಯಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಐಪಿಎಲ್ ಟೂರ್ನಿ ಆಯೋಜನೆಗೊಂಡಿತ್ತು. 2014ರಲ್ಲಿ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಯುಎಇ, ಟೂರ್ನಿಯ ಮೊದಲ 20 ಪಂದ್ಯಗಳಿಗೆ ಮಾತ್ರ ಆತಿಥ್ಯ ವಹಿಸಿತ್ತು. ಈ ಬಾರಿ ಟೂರ್ನಿ ಆಯೋಜನೆಯ ಬಗ್ಗೆ ಯುಎಇ ಕ್ರಿಕೆಟ್ ಮಂಡಳಿಯಿಂದಲೇ ಮೊದಲಿಗೆ ಆಹ್ವಾನ ಬಂದಿತ್ತು.
ಭಾರತದಲ್ಲಿ ಕರೊನಾ ಹಾವಳಿ ಕಡಿಮೆಯಾಗದಿದ್ದರೆ, 2021ರಲ್ಲಿ ನಡೆಯಬೇಕಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ಐಪಿಎಲ್ 14ನೇ ಆವೃತ್ತಿಗೂ ಯುಎಇ ಬದಲಿ ತಾಣವಾಗಿದೆ. ಆದರೆ ಈ ಸರಣಿ ಮತ್ತು ಮುಂದಿನ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಹೆಚ್ಚಿನ ಒಲವು ಹೊಂದಿದೆ.
ಯುಎಇಗೆ ಕ್ರಿಕೆಟ್ ಮಂಡಳಿಗೆ ನೀಡಿರುವ ಮೊತ್ತದ ಹೊರತಾಗಿ ಅರಬ್ ರಾಷ್ಟ್ರ ಇತರ ಮೂಲಗಳಿಂದಲೂ ಸಾಕಷ್ಟು ಲಾಭ ಮಾಡಿಕೊಂಡಿದೆ. ಟೂರ್ನಿಯ ವೇಳೆ 3 ತಿಂಗಳ ಕಾಲ ಯುಎಇಯ 14 ಫೈವ್‌ಸ್ಟಾರ್ ಹೋಟೆಲ್‌ಗಳು ಬಹುತೇಕ ತುಂಬಿದ್ದವು. ಇದರ ಬಾಡಿಗೆಯಿಂದಲೂ ಅರಬ್ ರಾಷ್ಟ್ರ ಕೋಟ್ಯಂತರ ರೂ. ಆದಾಯ ಗಳಿಸಿದೆ.