ಹುಬ್ಬಳ್ಳಿ: ಶರೇವಾಡ ಟೋಲ್ಗೇಟ್ ಬಳಿ ಸೋಮವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.
ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಬೈಕ್ಗಳ ಮೇಲೆ ಕುಳಿತಿದ್ದ ನಾಲ್ವರು ಒಂದೊಂದು ದಿಕ್ಕಿನಲ್ಲಿ ಬಿದ್ದಿದ್ದರು. ಈ ಪೈಕಿ ಮೂವರು ಸ್ಥಳದಲ್ಲೇ ಅಸುನೀಗಿದ್ದು, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಕುಂದಗೋಳ ನಿವಾಸಿ ಇಸ್ಮಾಯಿಲ್ ಬಸೀರಸಾಬ್ ಹುಬ್ಬಳ್ಳಿ(20), ಖಾಜಾಮೊಹಿನು ಬಾಷೇಸಾಬ ಮಿಶ್ರಿಕೋಟಿ (21) ಹಾಗೂ ನೂಲ್ವಿ ಗ್ರಾಮದ ಶಂಕ್ರಪ್ಪ ಬಸಲಿಂಗಪ್ಪ ಅಂಗಡಿ (27) ಮೃತರು. ನೂಲ್ವಿಯ ಸುರೇಶ ಗಂಗಪ್ಪ ವಲಮಣ್ಣವರ ಗಾಯಗೊಂಡಿದ್ದಾರೆ.
ಇಸ್ಮಾಯಿಲ್ ಬೈಕ್ನಲ್ಲಿ ಖಾಜಾಮೋಹಿನ್ನನ್ನು ಕರೆದುಕೊಂಡು ನೂಲ್ವಿಯಿಂದ ಕುಂದಗೋಳ ಕಡೆಗೆ ಹೊರಟಿದ್ದ. ಶಂಕ್ರಪ್ಪ ಅಂಗಡಿ ಬೈಕ್ನಲ್ಲಿ ಸುರೇಶನನ್ನು ಕರೆದುಕೊಂಡು ಕುಂದಗೋಳದಿಂದ ನೂಲ್ವಿ ಕಡೆಗೆ ಬರುತ್ತಿದ್ದ. ಇಬ್ಬರೂ ಅತಿ ವೇಗವಾಗಿ ಬಂದು ಬೈಕ್ ನಿಯಂತ್ರಿಸಲಾಗದೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಕ್ಕೆ ನಾಲ್ವರೂ ನಾಲ್ಕು ದಿಕ್ಕಿನಲ್ಲಿ ಬಿದ್ದಿದ್ದಾರೆ. ಇಸ್ಮಾಯಿಲ್, ಖಾಜಾಮೋಹಿನ್ ಹಾಗೂ ಶಂಕ್ರಪ್ಪ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುರೇಶ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್ಗೆ ದಾಖಲಿಸಲಾಗಿದೆ. ಎರಡೂ ಬೈಕ್ ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.