ಧರೆಗುರುಳಿದ ಕೊಲ್ಲೂರಿನ ತಾಕೊಡೆ ಮರ  
ಜಿಲ್ಲೆ

ಕಾಂತಬಾರೆ-ಬೂದಬಾರೆಯರಿಗೆ ತೊಟ್ಟಿಲು ಕಟ್ಟಿದ್ದ ತಾಕೊಡೆ ಮರ ಬುಡ ಸಹಿತ ಧರೆಗುರುಳಿದೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ-ಬೂದಬಾರೆ ಜನ್ಮ ಕ್ಷೇತ್ರದ ತಾಕೊಡೆ ಮರ ಶುಕ್ರವಾರ ಮಧ್ಯಾಹ್ನ ಬುಡಸಹಿತ ಉರುಳಿ ಬೀಳುವುದರೊಂದಿಗೆ ಇತಿಹಾಸದ ಜೀವಂತ ಸಾಕ್ಷಿಯೊಂದು ಅಂತ್ಯ ಕಂಡಂತಾಗಿದೆ.

ಸುಮಾರು 800ರಿಂದ 1000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಎಂದು ಅಧ್ಯಯನಗಳಿಂದ ದೃಢವಾಗಿದೆ.ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿದ್ದ ಅವಳಿ ವೀರರಾದ ಕಾಂತಬಾರೆ-ಬೂದಬಾರೆಯರು ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ನೇಲೆ(ಬಟ್ಟೆಯ ತೊಟ್ಟಿಲು) ಹಾಕಿ ತೂಗಿದ್ದು ಇದೇ ತಾಕೊಡೆ ಮರದ ಪಡ್ಡಾಯಿ(ಪಡುವಣ-ಪಶ್ಚಿಮ) ಕೊಂಬೆ ಎಂಬುವುದು ಉಲ್ಲೇಖನೀಯ.

ಬೃಹದಾಕಾರದ ಈ ಮರದ ಪಡ್ಡಾಯಿ ಗೆಲ್ಲು ಕೆಲ ವರ್ಷಗಳ ಹಿಂದೆ ಭಾರಿ ಗಾಳಿಮಳೆಯ ಸಂದರ್ಭ ಬಿದ್ದಿತ್ತು. 2ರಿಂದ 3ಮೀಟರ್‌ಗಳಷ್ಟು ವ್ಯಾಸವಿದ್ದ ಈ ಮರದ ಉತ್ತರ ದಿಕ್ಕಿನ ಗೆಲ್ಲು ಕೆಲ ದಿನಗಳ ಹಿಂದೆ ಬಿದ್ದಿತ್ತು. ಸುದೀರ್ಘ ಕಾಲಮಾನದಲ್ಲಿ ಅದರಷ್ಟೇ ಆದ ಯಾವುದೇ ಗಿಡ ಚಿಗುರಿದರೂ ಜೀವಂತ ಉಳಿದಿರಲಿಲ್ಲ. ಆದರೆ ಇದೀಗ ಪರ್ಯಾಯವಾಗಿ ಪಕ್ಕದಲ್ಲಿ ತಾಕೊಡೆಯ ಗಿಡವೊಂದು ಭವಿಷ್ಯದ ಸಾಕ್ಷಿಯಾಗಿ ಗೋಚರವಾಗಿದೆ.

ಪ್ರಶ್ನಾಚಿಂತನೆ ಬಳಿಕ ಮರ ತೆರವು

ಧಾರ್ಮಿಕ ಮಹತ್ವದ ಧರೆಗುಳಿದ ಮರದ ತೆರವಿಗೆ ಪೂರ್ವಭಾವಿಯಾಗಿ ಧಾರ್ಮಿಕ ಪ್ರಕ್ರಿಯೆ ಸಹಿತ ಪ್ರಶ್ನಾಚಿಂತನೆ ನಡೆಸಿ ಆ ಪ್ರಕಾರ ಮುಂದುವರಿಯಲು ಕ್ಷೇತ್ರದ ಆಡಳಿತ ಸಮಿತಿ ಹಾಗೂ ಟ್ರಸ್ಟ್ ತೀರ್ಮಾನಿಸಿದೆ.