

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ನಾವು ಅಧಿಕಾರಕ್ಕೆ ಬಂದರೆ ತ್ಯಾಜ್ಯ ವಿಲೇವಾರಿ ನಡೆಸಿ ಮಂಜೇಶ್ವರವನ್ನು ದುರ್ಗಂಧಮುಕ್ತಗೊಳಿಸುತ್ತೇವೆಂಬ ಭರವಸೆಯೊಂದಿಗೆ ಅಧಿಕಾರಕ್ಕೇರಿದವರ ಕಾಲಾವಧಿ ಮುಗಿಯಲು ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಆದರೆ ಮಂಜೇಶ್ವರದ ಎಲ್ಲೆಡೆ ತ್ಯಾಜ್ಯ ತುಂಬಿ ವಿಲೇವಾರಿಗೆ ಕ್ರಮ ಇಲ್ಲದೆ ಗುಬ್ಬೆದ್ದು ನಾರುತ್ತಿದು,್ದ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ.
ತ್ಯಾಜ್ಯ ವಿಲೇವಾರಿಯಲ್ಲಿ ಪಂಚಾಯಿತಿ ಅಧಿಕೃತರು ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ನಿರಂತರವಾಗಿ ಆರೋಪಿಸುತ್ತಲೇ ಇದ್ದಾರೆ. ಆದರೆ, ಸಮಸ್ಯೆಗೆ ಇಂದಿಗೂ ಪರಿಹಾರ ದೊರೆಯುತ್ತಿಲ್ಲವೆಂಬುದು ವಿಪರ್ಯಾಸವಾಗಿದೆ. ಮೊದಲು ಕರ್ನಾಟಕದಿಂದ ಆಗಮಿಸುತ್ತಿದ್ದ ಲಾರಿಯೊಂದು ಗುತ್ತಿಗೆ ಆಧಾರದಲ್ಲಿ ಮಂಜೇಶ್ವರದ ತ್ಯಾಜ್ಯಗಳನ್ನು ಕೊಂಡೊಯ್ಯುತಿತ್ತು. ಆದರೆ ಈ ಸಲ ಅದು ಕೂಡಾ ಇಲ್ಲದಾಗಿದೆ ಎಂದು ಊರವರು ಹೇಳುತ್ತಿದ್ದಾರೆ.
ಕುಂಜತ್ತೂರು-ಪದವು ರಸ್ತೆ, ಮಾಲಿಂಗೇಶ್ವರ-ಕುಂಜತ್ತೂರು ರಸ್ತೆ ಹಾಗೂ ಮಂಜೇಶ್ವರದ ಹಲವೆಡೆಯ ಸಾರ್ವಜನಿಕ ಸ್ಥಳಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ತ್ಯಾಜ್ಯ ರಾಶಿಗಳು ಗುಬ್ಬೆದ್ದು ನಾರುತ್ತಿದ್ದು, ಇಡೀ ಪ್ರದೇಶವೇ ದುರ್ಗಂಧಮಯವಾಗಿದೆ.
ಮತ್ತೊಂದು ಗಂಭೀರ ವಿಷಯದೆಂದರೆ ಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗುಜರಿ ಅಂಗಡಿಗಳಲ್ಲಿ ಹಾಗೂ ಇತರ ಕೆಲವು ಅಂಗಡಿಗಳ ಮುಂಭಾಗದ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸುಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ವಾಯುಮಾಲಿನ್ಯ ಉಂಟಾಗಿ ಜನರ ಉಸಿರಾಟಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಅಸ್ತಮ, ಶ್ವಾಸಕೋಶ ಸಮಸ್ಯೆ, ಕಣ್ಣಿನ ಉರಿ, ಗಂಟಲು ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಕ್ಯಾನ್ಸರ್‌ಗೂ ಕಾರಣವಾಗುತ್ತಿದೆ. ಈ ವಿಷಯದಲ್ಲೂ ಪಂಚಾಯಿತಿ ಅಧಿಕಾರಿಗಳ ಮೌನ ಸ್ಥಳೀಯರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಮಂಜೇಶ್ವರದ ಶಾಲೆಯೊಂದರಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲೆಯಿಂದ ಆಗಮಿಸಿದ ಶುಚಿತ್ವ ಮಿಶನ್ ಅಧಿಕಾರಿಗಳು ಹಾಗೂ ಇತರ ಉನ್ನತ ಅಧಿಕಾರಿಗಳು ಮಂಜೇಶ್ವರವನ್ನು ತ್ಯಾಜ್ಯ ಮುಕ್ತಗೊಳಿಸುವುದಾಗಿ ಸಭೆ ನಡೆಸಿ ಪಣ ತೊಟ್ಟಿದ್ದರೂ ಅದು ಕೂಡಾ ವಿಫಲಗೊಂಡಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.
ಮಳೆಗಾಲ ಆರಂಭಗೊಳ್ಳಲು ಕೆಲವೇ ವಾರಗಳಿದ್ದು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಇದೇ ಪರಿಸರದಿಂದ ಸಾಗಬೇಕಾಗಿದೆ. ಸಂಬಂಧಪಟ್ಟವರು ಇನ್ನಾದರೂ ಕೂಡಲೇ ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕೇವಲ ಸಭೆ ಸಮಾರಂಭಗಳಿಗೆ ಮಾತ್ರ ಸೀಮಿತವಾಗಿರುವ ತ್ಯಾಜ್ಯ ವಿಲೀವಾರಿ ಹೇಳಿಕೆ ಹಾಸ್ಯಾಸ್ಪದವಾಗಿದೆ. ಭರವಸೆಗಳನ್ನು ನೀಡಿ ಅಧಿಕಾರದ ಚುಕ್ಕಾಣಿ ಹಿಡಿದವರು ಇದೀಗ ನಾಡಿಗೆ ದುರ್ಗಂಧ ನೀಡಿ ನಿರ್ಗಮಿಸುವ ಕಾಲ ಸನ್ನಿಹಿತವಾಗಿದೆ.-ಅಬ್ದುಲ್ ಜಬ್ಬಾರ್ ಮಂಜೇಶ್ವರ, ಸಾಮಾಜಿಕ ಕಾರ್ಯಕರ್ತರು https://www.vijayavani.net/waste-around-water-source https://www.vijayavani.net/mariage-to-loving-couple