ಹುಮನಾಬಾದ್ ತಾಲೂಕಿನ ನಿಂಬೂರ ಹಾಗೂ ಸಿತಾಳಗೇರಾ ಮಧ್ಯೆ ಶುಕ್ರವಾರ ಭೂಕಂಪನ ಹಿನ್ನೆಲೆಯಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು.  
ಜಿಲ್ಲೆ

ಭೂಕಂಪನದ ಜತೆಗೇ ಕೇಳಿಬಂತು ಭೂಮಿಯೊಳಗಿಂದ ನಿಗೂಢ ಶಬ್ದ; ಗ್ರಾಮಗಳಿಗೆ ತಹಸೀಲ್ದಾರ್ ಭೇಟಿ

ಹುಮನಾಬಾದ್: ನಿಂಬೂರ ಮತ್ತು ಸಿತಾಳಗೇರಾ ಗ್ರಾಮಗಳ ಮಧ್ಯೆ ಶುಕ್ರವಾರ ಮಧ್ಯಾಹ್ನ ಭೂಮಿ ಕಂಪಿಸುವುದರ ಜತೆಗೆ ನಿಗೂಢ ಶಬ್ದ ಕೇಳಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಕೆಲದಿನಗಳ ಹಿಂದೆ ಹುಮನಾಬಾದ್ ಮತ್ತು ಚಿಟಗುಪ್ಪ ತಾಲೂಕಿನ ಕೆಲವೆಡೆ ಇದೇ ರೀತಿಯ ಶಬ್ದ ಭೂಮಿಯಿಂದ ಕೇಳಿಬಂದಿತ್ತು. ಭೂಗರ್ಭ ಶಾಸ್ತ್ರಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಯಾವುದೇ ಸಮಸ್ಯೆ ಇಲ್ಲ ಎಂದು ಗ್ರಾಮಸ್ಥರಲ್ಲಿ ಧೈರ್ಯ ತುಂಬಿತ್ತು. ಆದರೀಗ ಮತ್ತೆ ಭೂಮಿ ಕಂಪಿಸಿದ್ದರಿಂದ ಹಳ್ಳಿಗರಲ್ಲಿ ಭಯ ಮನೆ ಮಾಡಿದೆ.

ವಿಷಯ ತಿಳಿಯುತ್ತಲೇ ತಹಸೀಲ್ದಾರ್ ನಾಗಯ್ಯ ಹಿರೇಮಠ ಇತರ ಅಧಿಕಾರಿಗಳು ಎರಡೂ ಗ್ರಾಮಗಳಿಗೆ ತೆರಳಿ ಅವಲೋಕನ ನಡೆಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ದಾಖಲಾಗಿದ್ದು, ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ತಾಪಂ ಇಒ ಮುರಗೆಪ್ಪ ವಸ್ತ್ರದ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ, ಪಿಎಸ್ಐ ನಿಂಗಪ್ಪ ಇದ್ದರು.