ಕೇಂದ್ರ ಗೃಹ ಸಚಿವ ಅಮಿತ್​ ಷಾರನ್ನು ಭೇಟಿಯಾದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಎಚ್​.ಡಿ.ಕುಮಾರಸ್ವಾಮಿ 
ಬೆಂಗಳೂರು

ಹಿರಿಯೂರು ಉಪಚುನಾವಣೆ: ಅಮಿತ್ ಷಾ ಭೇಟಿ ಬೆನ್ನಲ್ಲೇ ಟಿಕೆಟ್ ಹಂಚಿಕೆ ಗೊಂದಲಗಳಿಗೆ ತೆರೆಎಳೆದ ಎಚ್​ಡಿಕೆ! HD Kumaraswamy

ಸ್ಥಳೀಯ ಬಿಜೆಪಿ ನಾಯಕರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್ ನನ್ನ ವೈರಿ ಅಲ್ಲ, ಅವರು ನನ್ನ ಆತ್ಮೀಯ ಸ್ನೇಹಿತರು, ಆದರೆ ಟಿಕೆಟ್ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಅನವಶ್ಯಕ ಎಂದು ಕಿವಿಮಾತು ಹೇಳಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಶಾಸಕ ಡಿ. ಸುಧಾಕರ್ ಅವರ ಸಾವಿನಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇನ್ನೂ ಚುನಾವಣೆ ದಿನಾಂಕ ಘೋಷಣೆ ಆಗದಿದ್ದರೂ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದರ ನಡುವೆ ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಗೊಂದಲದ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ( HD Kumaraswamy ) ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಕ್ಷೇತ್ರದ ವಾಸ್ತವ ಸ್ಥಿತಿಯನ್ನು ವಿವರಿಸಿರುವ ಕುಮಾರಸ್ವಾಮಿ, ಇಲ್ಲಿ ವೈಯಕ್ತಿಕ ಪ್ರತಿಷ್ಠೆಗಿಂತ ಎನ್‌ಡಿಎ (NDA) ಅಭ್ಯರ್ಥಿಯ ಗೆಲುವೇ ಮುಖ್ಯ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದೆ. ಮೊನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (ಕೌನ್ಸಿಲ್ ಆಫ್ ಮಿನಿಸ್ಟರ್ಸ್) ಈ ಬಗ್ಗೆ ಪ್ರಸ್ತಾಪವಾಗಿತ್ತು. ಬಳಿಕ ಅಮಿತ್ ಷಾ ಅವರೇ ಸಮಯ ನೀಡಿ ಭೇಟಿಯಾಗುವಂತೆ ಸೂಚಿಸಿದ್ದರು. ಈ ಭೇಟಿಯ ವೇಳೆ ಹಿರಿಯೂರು ಕ್ಷೇತ್ರದ ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು 'ಗ್ರೌಂಡ್ ರಿಯಾಲಿಟಿ'ಯನ್ನು ಮುಕ್ತವಾಗಿ ವಿವರಿಸಿದ್ದೇನೆ. ನನಗೆ ಇಲ್ಲಿ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಇಲ್ಲ, ರಾಜ್ಯದ ದುರಾಡಳಿತದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಹೋರಾಟ ಅರ್ಥಪೂರ್ಣವಾಗಿ ಮುಂದುವರಿಯಬೇಕು ಮತ್ತು ವೈಯಕ್ತಿಕ ಪ್ರತಿಷ್ಠೆಗಿಂತ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ನಮ್ಮ ಮುಖ್ಯ ಗುರಿಯಾಗಬೇಕು ಎಂಬುದನ್ನು ಅಮಿತ್ ಷಾ ಅವರ ಗಮನಕ್ಕೆ ತಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸ್ಥಳೀಯ ಬಿಜೆಪಿ ನಾಯಕರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್ ನನ್ನ ವೈರಿ ಅಲ್ಲ, ಅವರು ನನ್ನ ಆತ್ಮೀಯ ಸ್ನೇಹಿತರು, ಆದರೆ ಟಿಕೆಟ್ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಅನವಶ್ಯಕ ಎಂದು ಕಿವಿಮಾತು ಹೇಳಿದ್ದಾರೆ. ಚುನಾವಣೆ ಗೆಲ್ಲುವ ದೃಷ್ಟಿಯಿಂದ ಏನೇ ಭಿನ್ನಾಭಿಪ್ರಾಯ ಅಥವಾ ಚರ್ಚೆಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಕೂತು ಬಗೆಹರಿಸಿಕೊಳ್ಳಬೇಕು. ಹಿರಿಯೂರಿನಲ್ಲಿ ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿ ಎಂಬ ಪ್ರಶ್ನೆ ಬರುವುದಿಲ್ಲ, ಬದಲಾಗಿ ಅಲ್ಲಿ ಕಣಕ್ಕಿಳಿಯುವುದು ಕೇವಲ 'ಎನ್‌ಡಿಎ ಅಭ್ಯರ್ಥಿ' ಮಾತ್ರ. ನನಗೆ ಯಾವುದೇ ಆತುರವಿಲ್ಲ, ಎಲ್ಲರೂ ಒಟ್ಟಾಗಿ ಕೂತು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ತಮ್ಮ ಹೋರಾಟವನ್ನು ನೆನಪಿಸಿಕೊಂಡ ಕುಮಾರಸ್ವಾಮಿ, ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಸರ್ಕಾರದ ವೈಫಲ್ಯಗಳಾದ ನೈಸ್ (NICE) ಹಗರಣ, ಕೆಪಿಎಸ್‌ಸಿ (KPSC), ಬಿಡದಿ ವಿಚಾರ ಹಾಗೂ ಮುಖ್ಯಮಂತ್ರಿಗಳು ಮಾಡಿಸಿದ್ದಾರೆ ಎನ್ನಲಾದ ಸ್ಟಿಂಗ್ ಆಪರೇಷನ್ ಬಗ್ಗೆ ಅತ್ಯಂತ ಕಟುವಾಗಿ ಟೀಕೆ ಮಾಡಿರುವುದು ನಾನೇ, ಹಾಗೆಯೇ ಆಡಳಿತ ಪಕ್ಷದವರಿಂದ ಅತ್ಯಂತ ಕಟುವಾಗಿ ಬೈಸಿಕೊಂಡಿರುವವನೂ ನಾನೇ ಎಂದಿದ್ದಾರೆ. ನನ್ನ ಈ ಎಲ್ಲಾ ಹೋರಾಟಗಳು ಎನ್‌ಡಿಎ ಮೈತ್ರಿಕೂಟಕ್ಕೆ ಶಕ್ತಿ ತುಂಬುವ ಉದ್ದೇಶದಿಂದಲೇ ನಡೆಯುತ್ತಿವೆ. ಅಮಿತ್ ಷಾ ಅವರಿಗೆ ಕರ್ನಾಟಕದಲ್ಲಿ ನಿಮಿಷದಿಂದ ನಿಮಿಷಕ್ಕೆ (ಮಿನಿಟ್ ಟು ಮಿನಿಟ್) ಏನು ನಡೆಯುತ್ತಿದೆ ಎಂಬ ಸಂಪೂರ್ಣ ಮಾಹಿತಿಯಿದೆ ಮತ್ತು ನಾನು ನಡೆಸುತ್ತಿರುವ ಹೋರಾಟದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಎಚ್‌ಡಿಕೆ ತಿಳಿಸಿದ್ದಾರೆ.

ಅಮಿತ್ ಷಾ ಅವರ ಪ್ರತಿಕ್ರಿಯೆ ಕುರಿತು ಮಾತನಾಡಿದ ಕುಮಾರಸ್ವಾಮಿ, ಗೃಹ ಸಚಿವರು ಅತ್ಯಂತ ಮುಕ್ತ ಮನಸ್ಸಿನಿಂದ ಮಾತನಾಡಿದ್ದು, ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಬೇಕು ಎಂಬುದೇ ಹೈಕಮಾಂಡ್ ಆಶಯವಾಗಿದೆ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಮೈತ್ರಿಯನ್ನು ಬಿರುಕುಗೊಳಿಸಲು ಅಥವಾ ನಾಯಕರ ನಡುವೆ ಮನಸ್ತಾಪ ಉಂಟುಮಾಡಲು ಯಾರಾದರೂ ಪ್ರಯತ್ನ ಪಟ್ಟರೆ ಖಂಡಿತವಾಗಿಯೂ ಯಶಸ್ಸು ಕಾಣುವುದಿಲ್ಲ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಮಟ್ಟದ ಸಭೆಗಳಲ್ಲಿ ಅಥವಾ ಯಾವುದೋ ಒಂದು ಘಟಕದವರು ನೀಡಿರುವ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಷ್ಟೇ, ಅದರಿಂದ ಮೈತ್ರಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಮತ್ತು ಅಮಿತ್ ಷಾ ಅವರು ನೀಡಿರುವ ಕೆಲವು ಸೂಚನೆಗಳ ಆಧಾರದ ಮೇಲೆ ನಾವು ಮುಂದಿನ ಚರ್ಚೆ ನಡೆಸುತ್ತೇವೆ ಎಂದು ಎಚ್​ಡಿಕೆ ಹೇಳಿದರು.

ಹಿರಿಯೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಮೈತ್ರಿಕೂಟದ ಒಗ್ಗಟ್ಟು ಎಷ್ಟು ಅನಿವಾರ್ಯ ಎಂಬುದನ್ನು ಕುಮಾರಸ್ವಾಮಿ ಒತ್ತಿ ಹೇಳಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರವು ಒಂದೊಂದು ಜಾತಿಗೆ ಒಬ್ಬೊಬ್ಬರಂತೆ ಹಲವಾರು ಸಮುದಾಯಗಳಿಗೆ ಸೇರಿದ ಸಚಿವರನ್ನು ಹಿರಿಯೂರಿಗೆ ನಿಯೋಜಿಸಿದೆ. ಅಧಿಕಾರ ಹಾಗೂ ಹಣಬಲವನ್ನು ಇಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಲು ಮುಂದಾಗಿದೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕಾದರೆ, ನಮ್ಮ ಪಕ್ಷವೇ ನಿಲ್ಲಬೇಕು ಎಂಬ ಹಠಕ್ಕಿಂತ ಹೆಚ್ಚಾಗಿ ಮೈತ್ರಿಕೂಟದಲ್ಲಿ ಒಗ್ಗಟ್ಟು ಕಾಯ್ದುಕೊಂಡು ಹಿರಿಯೂರು ಕ್ಷೇತ್ರವನ್ನು ಗೆಲ್ಲುವುದೇ ಸದ್ಯದ ಅತ್ಯಂತ ಪ್ರಮುಖ ಆದ್ಯತೆಯಾಗಿದೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.