ಜಿಲ್ಲೆ

ಬೆಳ್ಳಂಬೆಳಗ್ಗೆ ತಟ್ಟಿದ ಸಾರಿಗೆ ನೌಕರರ ಮುಷ್ಕರ ಬಿಸಿ: ಸರ್ಕಾರಿ ನಿಲ್ದಾಣದಲ್ಲಿ ಖಾಸಗಿ ದರ್ಬಾರ್​, ದುಪ್ಪಟ್ಟು ದರ

ಬೆಂಗಳೂರು: 6ನೇ ವೇತನ ಆಯೋಗ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಇಂದು ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ಕೈಗೊಂಡಿದ್ದು, ಬೆಳ್ಳಂಬೆಳಗ್ಗೆಯೇ ಹಲವೆಡೆ ಪ್ರಯಾಣಿಕರು ಪರದಾಡುವಂತಾಗಿದೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಮುಷ್ಕರಕ್ಕೆ ಕರೆ ನೀಡಿರುವುದು ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದೆ. ಆದರೆ, ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆದಿರುವ ಸರ್ಕಾರ, ಖಾಸಗಿ ಬಸ್​ಗಳಿಗೆ ಸರ್ಕಾರಿ ಬಸ್​ ನಿಲ್ದಾಣಗಳಲ್ಲಿ ಅನುಮತಿ ನೀಡಿದ್ದು, ಕೊಂಚ ಮಟ್ಟಿಗೆ ನಿರಾಳ ಎನಿಸಿದರೂ ಸಾರಿಗೆ ನೌಕರರ ಕೆಂಗಣ್ಣಿಗೆ ಗುರಿಯಾಗಿ ಮುಷ್ಕರ ಹಿಂಸೆಗೆ ತಿರುಗುವ ಆತಂಕವೂ ಇದೆ.

ಆದರೂ ಪೊಲೀಸ್​ ಭದ್ರತೆಯಲ್ಲಿ ಅಲ್ಲಲ್ಲಿ ಖಾಸಗಿ ಬಸ್​ಗಳು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದು, ಪ್ರಯಾಣಿಕರಿಗೆ ಟಿಕೆಟ್​ ದರದ ಬಿಸಿಯು ತಟ್ಟಿದೆ. ವಿಜಯನಗರ, ಬಳ್ಳಾರಿ, ಹುಬ್ಬಳ್ಳಿ, ದಾವಣಗೆರೆ, ಚಿಕ್ಕಮಗಳೂರು, ಕಲಬುರಗಿ, ಮೈಸೂರು, ರಾಮನಗರ, ಮಂಡ್ಯ ಹಾಗೂ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದ ಬಿಸಿ ಬೆಳ್ಳಂ ಬೆಳಗ್ಗೆಯೆ ತಟ್ಟಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು, ತಮ್ಮ ತಮ್ಮ ಊರುಗಳಿಗೆ ಸಾರಿಗೆ ಬಸ್ಸನ್ನೇ ನಂಬಿದ್ದ ಪ್ರಯಾಣಿಕರಿಗೆ ಈ ಮುಷ್ಕರವೂ ತೀವ್ರ ಪರಿಣಾಮ ಬೀರಿದೆ. ಬೀದರ್​ನಲ್ಲಿ ಮಹಿಳೆಯೊಬ್ಬರು ತನ್ನ ಮಕ್ಕಳೊಂದಿಗೆ ಬಸ್​ಗಾಗಿ ಕಾಯುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಬಹುತೇಕರಿಗೆ ಇಂದು ಮುಷ್ಕರ ಎಂಬುದೇ ತಿಳಿದಿಲ್ಲ. ತಿಳಿಯದೇ ಬಸ್​ ನಿಲ್ದಾಣಕ್ಕೆ ಬಂದವರು ಇದೀಗ ಬಸ್​ಗಾಗಿ ಹುಡುಕಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಖಾಸಗಿ ವಾಹನ ಸಂಚಾರ

ಮುಷ್ಕರ ಹಿನ್ನೆಲೆಯಲ್ಲಿ ಬಹುತೇಕ ಕಡೆ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಸರ್ಕಾರವೇ ಇದಕ್ಕೆ ಅನುಮತಿಯನ್ನು ಸಹ ನೀಡಿದೆ. ಅಲ್ಲದೆ, ಸರ್ಕಾರಿ ಬಸ್​ ನಿಲ್ದಾಣಗಳಲ್ಲಿ ಖಾಸಗಿ ಬಸ್​ ನಿಲುಗಡೆಗೆ ಅನುಮತಿಯನ್ನು ನೀಡಲಾಗಿದೆ. ಹೀಗಾಗಿ ಕೆಲವೆಡೆ ನೌಕರರ ಮುಷ್ಕರ ಪರಿಣಾಮ ಬೀರಿಲ್ಲ. ಆದರೆ, ಸಾರಿಗೆ ಬಸ್​ ಅನ್ನೇ ನಂಬಿದ್ದ ಊರುಗಳಿಗೆ ಮುಷ್ಕರದ ಪರಿಣಾಮ ಬೀರಿದೆ. ಆದರೆ, ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಖಾಸಗಿ ಬಸ್​ಗಳು ದುಪ್ಪಟ್ಟು ದರವನ್ನು ವಿಧಿಸಿ ಪ್ರಯಾಣಿಕರಿಗೆ ಮತ್ತಷ್ಟು ಹೊರೆ ಹಾಕುತ್ತಿವೆ.