ಜಿಲ್ಲೆ

ಪೊಲೀಸ್​ ದಂಪತಿ ಆತ್ಮಹತ್ಯೆಗೆ ಶರಣು: ಡಿವೈಎಸ್ಪಿ ಪ್ರಕರಣ ಬೆನ್ನಲ್ಲೇ ಪೊಲೀಸ್​ ಇಲಾಖೆಗೆ ಮತ್ತೊಂದು ಶಾಕ್​!

ಬೆಂಗಳೂರು: ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಪೊಲೀಸ್​ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಪ್ರಕರಣ ಶುಕ್ರವಾರ ವರದಿಯಾಗಿದೆ.

ಪೊಲೀಸ್ ಪೇದೆಗಳಾದ ಶೀಲಾ ಹಾಗೂ ಹೆಚ್.ಸಿ. ಸುರೇಶ್ ನೇಣಿಗೆ ಶರಣಾಗಿದ್ದಾರೆ. ಕಳೆದ ಹತ್ತು ವರ್ಷದ ಹಿಂದೆ ಶೀಲಾ‌ ಮತ್ತು ಸುರೇಶ್​ ಮದುವೆಯಾಗಿದ್ದರು. ಇಬ್ಬರದ್ದು ಪ್ರೇಮವಿವಾಹ. ಶೀಲಾ ಮೂಲತಃ ಚಿಕ್ಕಮಗಳೂರಿನವರು. ಸುರೇಶ್ ಕೋಲಾರ ಮೂಲದವರು. ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸ್​ ತನಿಖಾ ನಂತರವಷ್ಟೇ ಪೂರ್ಣ ಮಾಹಿತಿ ದೊರೆಯಲಿದೆ.

ಶೀಲಾ ಕೊತ್ತನೂರು ಠಾಣೆಯಲ್ಲಿ ಹಾಗೂ ಸುರೇಶ್​ ಸಂಪಿಗೆಹಳ್ಳಿ ಎಸಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆ ಪ್ರಕರಣ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)