ಜಿಲ್ಲೆ

ಪಬ್​ನಲ್ಲಿ ಯುವತಿಯ ಭುಜ ಕಚ್ಚಿ ವಿಕೃತಿ ಮೆರೆದ ಕಾಮುಕ: ಕೃತ್ಯಕ್ಕೂ ಮುನ್ನ ಈತನ ಸಂಚು ಭಯಾನಕ!

ಬೆಂಗಳೂರು: ಸಿಲಿಕಾನ್ ಸಿಟಿಯ ಪಬ್​ಗಳಲ್ಲಿ ಮಹಿಳೆಯರಿಗಿಲ್ವಾ ಸುರಕ್ಷತೆ? ಕುಟುಂಬಸ್ಥರ ಜತೆ ಪಬ್​ಗಳಿಗೆ ಹೋದರು ತೊಂದರೆ ತಪ್ಪಿದ್ದಲ್ಲ ಎನ್ನುವುದಕ್ಕೆ ಸಾಕ್ಷಿಯಂತಿದೆ ಕೆಲವು ದಿನಗಳ ಹಿಂದೆ ಅಮಾನವೀಯ ಘಟನೆ. ಪಬ್​ಗಳಲ್ಲಿ ಮಹಿಳೆಯರಿಗೆ ಭದ್ರತೆ ಕೊಡುವಂತೆ ಪೊಲೀಸರು ಆದೇಶ ನೀಡಿದ್ದರೂ, ಆ ಆದೇಶ ಬರೀ ಖಾಲಿ ಹಾಳೆಗೆ ಸಿಮಿತವಾಯ್ತ? ಎಂಬ ಪ್ರಶ್ನೆ ಕಾಡುವಂತಿದೆ.

ತಾಯಿ ಜತೆ ಪಬ್​ಗೆ ಬಂದ ಯುವತಿಗೂ ರಕ್ಷಣೆ ಕೊಡದ ಪಬ್ ಇನ್ನೇಷ್ಟು ಸೇಫ್? ಪ್ರತಿ ಪಬ್ ಅಂಡ್ ರೆಸ್ಟೋರೆಂಟ್​ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ, ಮಹಿಳೆಯರಿಗೆ ಭದ್ರತೆ ಕೊಡುವಂತೆ ಪೊಲೀಸ್​ ಇಲಾಖೆ ಸೂಚನೆ ನೀಡಿದೆ. ಆದರೆ ಇದ್ಯಾವುದನ್ನು ಪಾಲಿಸದ ಪಬ್​ ಮಾಲೀಕರು ನಿಯಮಗಳನ್ನ ಗಾಳಿಗೆ ತೂರಿದ್ದಾರೆ.

ಹೀಗಾಗಿ ಪಬ್-ಗಿಬ್ಬು ಎಂದು ತಿರುಗಾಡೋ ಯುವತಿಯರು ತುಂಬಾ ಎಚ್ಚರಬಹಿಸಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಮೈಮರೆತರೆ ಅಂಥವರಿಗಾಗಿಯೇ ಪಬ್​ಗಳಲ್ಲಿ ಕಾದು ಕುಳಿತಿರುತ್ತಾನೆ ಕಾಮುಕ. ಹೀಗಾಗಿ ವಾರಾಂತ್ಯದಲ್ಲಿ ಪಬ್​ಗಳಿಗೆ ಹೋಗುವ ಯುವತಿಯರು ಎಚ್ಚರವಹಿಸುವುದು ಸೂಕ್ತ. ಇಲ್ಲವಾದರೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ.

ಹೌದು. ಚರ್ಚ್ ಸ್ಟ್ರೀಟ್ ರೋಡ್​ನಲ್ಲಿರುವ ಶರತ್ ರೈ ಎಂಬುವರಿಗೆ ಸೇರಿದ ಮೀರಾಜ್ ಬಾರ್ ಅಂಡ್ ರೆಸ್ಟೋರೆಂಟ್​ನಲ್ಲಿ ಕಾಮುಕನೊಬ್ಬ ಯುವತಿ ಮೇಲೆ ವಿಕೃತಿ ಮೆರೆದಿದ್ದಾನೆ. ಈ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ಯುವತಿಯ ಜತೆ ಪೋಷಕರಿದ್ದರು ಕೇರ್​ ಮಾಡದ ಕಾಮುಕ ಸ್ನೇಹಿತರಂತೆ ಪರಿಚಯವಾಗಿ ಯುವತಿ ಬಳಿ ಬಂದು ವಿಕೃತಿ ಮೆರೆದಿದ್ದಾನೆ.

ಇದೇ ತಿಂಗಳ 21ರ ರಾತ್ರಿ 9:30ಕ್ಕೆ ತಾಯಿ ಹಾಗೂ ಸ್ನೇಹಿತರ ಜತೆ ಯುವತಿ ಪಬ್​ಗೆ ಎಂಟ್ರಿ ಕೊಟ್ಟಿದ್ದಳು. ಈ ವೇಳೆ ಸ್ನೇಹಿತೆಯ ಕಡೆಯಿಂದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಕಾಮುಕ ಮಧುಸೂದನ್ ಚೆಲ್ಲಾರಾಮ್, ಪಬ್​ನಲ್ಲಿ ಪಾರ್ಟಿ ಮಾಡ್ತಿದ್ದ ವೇಳೆ ಯುವತಿ ಬಳಿ ಬಂದಿದ್ದಾನೆ. ಬಳಿಕ ಆಕೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ.

ಈ ವೇಳೆ ಯುವತಿಯ ಭುಜ ಕಚ್ಚಿ ವಿಕೃತಿ ಮೆರೆದಿದ್ದಾನೆ. ಅಲ್ಲದೆ, ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಸದ್ಯ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಮಧುಸೂದನ್​ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)