ಜಿಲ್ಲೆ

ಬೊವ್​ ಬೊವ್​..!: ನಾನು ನಿಮ್ಮ ಪೊಲೀಸ್​ ಶ್ವಾನ; ಬೆಂಗಳೂರು ಪೌವ್​ ಪಟ್ರೋಲ್​, ಇದು ನನ್ನ ಎಕ್ಸ್​ ಖಾತೆ..

Webdesk - Ravikanth

ಬೆಂಗಳೂರು: ಬೊವ್​ ಬೊವ್​...!!

ನಾನು ನಿಮ್ಮ ಪ್ರೀತಿಯ ಪೊಲೀಸ್​ ಶ್ವಾನ ಭೂಮಿ!! ನೀವೆಲ್ಲ ಕ್ಷೇಮವಾಗಿದ್ದೀರಾ ?

ಅಂದ ಹಾಗೆ ಶನಿವಾರ ಮಾನ್ಯ ಪ್ರಧಾನ ಮಂತ್ರಿಗಳು ಭೇಟಿ ನೀಡಿದ್ದ ಇಸ್ರೋ ಸುತ್ತಮುತ್ತಲಿನ ಪ್ರದೇಶವನ್ನು ಆಘ್ರಾಣಿಸಿ ಯಾವುದೇ ಸ್ಫೋಟಕಗಳು ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡೆ..!

ಹೌದು..ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಶ್ರಮಿಸುತ್ತಾರೋ ಅದೇ ರೀತಿ ಅವರೊಂದಿಗೆ ಶ್ವಾನ ದಳ ಸಹ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದೆ.

ಆದರೆ, ಮಾತ್ರ ಡಾಗ್​ ಸ್ಕ್ವಾಡ್​ ಕರ್ತವ್ಯನಿಷ್ಠೆ, ಕ್ಷಮತೆ ಮತ್ತು ಅದರ ಕಾರ್ಯವೈಖರಿ ಕುರಿತ ಮಾಹಿತಿ ಸಾರ್ವಜನಿಕರಿಗೆ ತಲುಪುತ್ತಿಲ್ಲ. ಜನರಿಗೆ ತಲುಪಿಸುವ ಸಲುವಾಗಿ ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್​ ಅವರೇ ಆಸಕ್ತಿ ವಹಿಸಿ "ಬೆಂಗಳೂರು ಪೌವ್​ ಪಟ್ರೋಲ್​' ಎಕ್ಸ್​​ ಖಾತೆ ತೆರೆದಿದ್ದು, ಆಗಸ್ಟ್​ 26ರಂದು "ವಿಶ್ವ ಶ್ವಾನ ದಿನಾಚರಣೆ' ದಿನದಂದು ಪರಿಚಯಿಸಿದ್ದಾರೆ.

ಬೆಂಗಳೂರು ನಗರ ಕಮಿಷನರೇಟ್​ನಲ್ಲಿನ ಶ್ವಾನ ದಳದಲ್ಲಿ ಇರುವ 62 ಶ್ವಾನಗಳು ಪ್ರತಿನಿತ್ಯ ಪೊಲೀಸರೊಂದಿಗೆ ನಿರ್ವಹಿಸುವ ಕೆಲಸ ಕಾರ್ಯಗಳ ವಿಡಿಯೋ, ಫೋಟೋಗಳನ್ನು ಎಕ್ಸ್​ನಲ್ಲಿ ಅಪ್​ಲೋಡ್​ ಮಾಡಲಾಗುತ್ತಿದೆ. ಶ್ವಾನ ತನ್ನ ಎಕ್ಸ್​​ ಖಾತೆಯನ್ನು ತಾನೇ ನಿರ್ವಹಿಸಿದಂತೆ ಭಾಷೆ ಬಳಸುತ್ತಿರುವುದು ನೆಟ್ಟಿಗರ ಆಕರ್ಷಣೆಯಾಗಿದೆ.

ಆಡುಗೋಡಿ ಸಿಎಆರ್​ (ದಕ್ಷಿಣ) ಆವರಣದಲ್ಲಿ ಡಾಗ್​ ಸ್ಕ್ವಾಡ್​​ ಇದ್ದು, 62 ಶ್ವಾನಗಳಿವೆ. ಪೊಲೀಸ್​ ಶ್ವಾನ ದಳಕ್ಕೆ ಸೇರ್ಪಡೆಯಾಗುವ ಪ್ರತಿಯೊಂದ ಶ್ವಾನಕ್ಕೂ ಇಲ್ಲಿಯೇ ತರಬೇತಿ ನೀಡಲಾಗುತ್ತದೆ.

ವಿಶ್ವ ಶ್ವಾನ ದಳ ದಿನಾಚರಣೆ ಅಂಗವಾಗಿ ಆಡುಗೋಡಿಗೆ ಬಿ.ದಯಾನಂದ್​ ಭೇಟಿ ಕೊಟ್ಟು ಡಾಗ್​ ಸ್ಕ್ವಾಡ್​ನಲ್ಲಿ ಇರುವ ಶ್ವಾನಗಳಿಗೆ ಶುಭ ಕೋರಿದರು. ಶ್ವಾನಗಳ ಕೊಠಡಿ ಪರಿಶೀಲನೆ ಮತ್ತು ಶ್ವಾನಗಳ ಹ್ಯಾಂಡ್ಲರ್​ಗಳೊಂದಿಗೆ ಚರ್ಚೆ ನಡೆಸಿದರು. ಸುಧಾರಣೆ ತರುವ ಬಗ್ಗೆ ಮಾಹಿತಿ ಕಲೆ ಹಾಕಿದರು.

ಪೊಲೀಸ್​ ಆಯುಕ್ತರಲ್ಲಿ ಮನವಿ. ನಮಗೆ ಕೊಟ್ಟಿರುವ ಬೊಲೋರೊ ವಾಹನಗಳಲ್ಲಿ ಪ್ರಯಾಣಿಸಲು ಕಷ್ಟವಾಗುತ್ತಿದೆ. ಇಕ್ಕಟ್ಟಿನ ಸ್ಥಳದಲ್ಲಿ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹ್ಯಾಂಡ್ಲರ್​ ಮತ್ತು ನಮಗೆ ಪ್ರತ್ಯೇಕ ಕ್ಯಾಬಿನ್​ ಇರುವಂತೆ ವಿಶೇಷ ವಾಹನ ಸೌಲಭ್ಯ ಒದಗಿಸಿ. | ಭೂಮಿ, ಪೊಲೀಸ್​ ಶ್ವಾನ ದಳ ಸದಸ್ಯೆ

ಮೂರು ತಂಡಗಳು

ಬೆಂಗಳೂರು ನಗರ ವಿಭಾಗದಲ್ಲಿ ಡಾಗ್​ ಸ್ಕ್ವಾಡ್​ನಲ್ಲಿ ವಿಶೇಷ ತರಬೇತಿ ಹೊಂದಿರುವ 62 ಶ್ವಾನಗಳಿವೆ. ಇದರಲ್ಲಿ ಅಪರಾಧ, ಸ್ಫೋಟಕ ವಸ್ತುಗಳ ಪತ್ತೆ ಹಾಗೂ ನಾಕೋರ್ಟಿಕ್​ ಎಂದು ತಂಡ ರಚಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಎಲ್ಲಿಯೇ ಕೊಲೆ, ಮನೆ ಕಳ್ಳತನ, ಕನ್ನ ಸೇರಿದಂತೆ ಗಂಭೀರ ಅಪರಾಧ ಕೃತ್ಯಗಳು ನಡೆದರೇ ಅಪರಾಧ ವಿಭಾಗದ ಶ್ವಾನ ದಳ ಭೇಟಿ ಕೊಟ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳಿಗೆ ಸಹಾಯ ಮಾಡುತ್ತವೆ.

ಅದೇ ರೀತಿ ಸ್ಫೋಟಕ ವಸ್ತುಗಳ ಪತ್ತೆ ದಳದ ಶ್ವಾನಗಳು ಪ್ರತಿನಿತ್ಯ ಅತೀ ಗಣ್ಯ, ಗಣ್ಯ ವ್ಯಕ್ತಿಗಳು ಭೇಟಿ ಕೊಡುವ ಸ್ಥಳಕ್ಕೆ ತೆರಳಿ ಸ್ಫೋಟಕ ಮತ್ತು ಅನುಮಾನಸ್ಪದ ವಸ್ತುಗಳು ಇಲ್ಲವೆಂದು ಖಾತ್ರಿಪಡಿಸುತ್ತವೆ. ರೈಲು ನಿಲ್ದಾಣ, ವಿಧಾನಸೌಧ, ವಿಮಾನ ನಿಲ್ದಾಣ, ಮುಖ್ಯಮಂತ್ರಿ, ಮಾಜಿ ಪ್ರಧಾನಿ ನಿವಾಸಿ ಸೇರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಿಗೆ ನಿಗದಿತ ಸಮಯದಲ್ಲಿ ಭೇಟಿ ಕೊಟ್ಟು ಸ್ಫೋಟಕ ವಸ್ತುಗಳ ಇಲ್ಲವೆಂದು ಪೊಲೀಸರಿಗೆ ಭರವಸೆ ನೀಡುತ್ತವೆ.

ಇನ್ನೂ ನಾಕೋರ್ಟಿಕ್​ ವಿಭಾಗ ಶ್ವಾನಗಳು ಪರಪ್ಪನ ಅಗ್ರಹಾರ ಜೈಲು, ಕೊರಿಯರ್​ ಕಚೇರಿಯಲ್ಲಿ ಪಾರ್ಸೆಲ್​, ರೈಲು, ವಿಮಾನ, ಬಸ್​ ನಿಲ್ದಾಣ ಸೇರಿದಂತೆ ಮಾದಕ ವಸ್ತುಗಳ ಮಾರಾಟ, ಸಾಗಾಟ ಮತ್ತು ಸೇವೆ ದಂಧೆ ನಡೆಯುವ ಸ್ಥಳಗಳಿಗೆ ಶ್ವಾನಗಳು ಭೇಟಿ ಕೊಟ್ಟು ಡ್ರಗ್ಸ್​ ಪತ್ತೆ ಮಾಡಲಿವೆ.