ಜಿಲ್ಲೆ

ಬೇರೆಡೆ ಇರುವ ಆಸ್ತಿ ತೆರಿಗೆ ರಿಯಾಯಿತಿ ವಿಸ್ತರಣೆ ಬಿಬಿಎಂಪಿಗಿಲ್ಲ! ವಿಸ್ತರಣೆಯಿಲ್ಲ ಎಂದು ಪಾಲಿಕೆ ಕಮಿಷನರ್ ಟ್ವೀಟ್

ಸತೀಶ್ ಕೆ.ಬಳ್ಳಾರಿ

ಬೆಂಗಳೂರು: ಆಸ್ತಿ ತೆರಿಗೆ ಮೇಲೆಯೇ ಬಿಬಿಎಂಪಿ ಹೆಚ್ಚು ಅವಲಂಬನೆ ಯಾಗಿದೆ. 2020-21ನೇ ಸಾಲಿನ ತೆರಿಗೆಯನ್ನು ಏ.30ರೊಳಗೆ ಪಾವತಿ ಮಾಡಿದರೆ ಶೇ.5 ರಿಯಾಯಿತಿ ಸಿಗಲಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಇನ್ನೊಂದು ತಿಂಗಳು ವಿಸ್ತರಣೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಿಸ್ತರಿಸುವುದಿಲ್ಲ ಎಂಬ ಆಯುಕ್ತರ ಟ್ವೀಟ್ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಸುವವರಿಗೆ ಪ್ರಸ್ತುತ ವರ್ಷದ ಪೂರ್ಣ ತೆರಿಗೆಯನ್ನು ಆರ್ಥಿಕ ವರ್ಷ ಆರಂಭವಾಗಿ ತಿಂಗಳ ಒಳಗಾಗಿ (ಏ.30) ಪಾವತಿಸಿದರೆ ಶೇ.5 ರಿಯಾಯಿತಿ ದೊರೆಯುತ್ತದೆ. ನಂತರ ಕೆಲವು ತಿಂಗಳು ತೆರಿಗೆ ಮೊತ್ತ ಪಾವತಿಗೆ ಹಾಗೂ ಅದರ ನಂತರ ತೆರಿಗೆ ಜತೆಗೆ ಬಡ್ಡಿ ವಿಧಿಸಿ ಪಾವತಿಗೆ ಸೂಚನೆ ನೀಡುತ್ತದೆ. ಆದರೆ ಈಗಾಗಲೇ ಪೌರಾಡಳಿತ ನಿರ್ದೇಶನಾಲಯವು ನಗರ ಸ್ಥಳೀಯ ಸಂಸ್ಥೆಗಳು ವಿಧಿಸುವ ಆಸ್ತಿ ತೆರಿಗೆ ಮೇಲಿನ ಶೇ.5 ರಿಯಾಯಿತಿಯನ್ನು ಮೇ 31 ರವರೆಗೆ ವಿಸ್ತರಣೆ ಮಾಡಿ ಸುತ್ತೋಲೆ ಹೊರಡಿಸಿದೆ. ಆದರೆ ಬಿಬಿಎಂಪಿಯಲ್ಲಿ ತೆರಿಗೆ ರಿಯಾಯಿತಿ ವಿಸ್ತರಣೆ ನಿರ್ಧಾರವನ್ನು ಕೌನ್ಸಿಲ್ ಸಭೆಯಲ್ಲಿ ಕೈಗೊಳ್ಳಬೇಕಾಗಿದೆ.

ಆಸ್ತಿ ತೆರಿಗೆಯೇ ಆದಾಯದ ಮೂಲ: ಆಸ್ತಿ ತೆರಿಗೆ ಬಿಬಿಎಂಪಿ ಆದಾಯದ ಪ್ರಮುಖ ಮೂಲವಾಗಿದೆ. 2019-20ನೇ ಸಾಲಿನಲ್ಲಿ 3,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿತ್ತು. ಆದರೆ 2,600 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಈ ಮೂಲಕ ಶೇ.76 ಗುರಿ ಮಾತ್ರ ಸಾಧಿಸಿದೆ. ಈಗ 2020-21 ನೇ ಸಾಲಿನಲ್ಲಿಯೂ 3,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಪಾವತಿದಾರರ ಪ್ರಮಾಣ ಹೆಚ್ಚಾದರೂ, ಕರೊನಾ ಸೋಂಕು ಇರುವ ಕಾರಣ ಆಸ್ತಿ ತೆರಿಗೆ ಗುರಿ ಹೆಚ್ಚಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ರಿಯಾಯಿತಿ ನಿರೀಕ್ಷೆ: ಲಾಕ್​ಡೌನ್ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಆನ್​ಲೈನ್ ಮೂಲಕ ಮಾತ್ರ ಅವಕಾಶ ನೀಡಲಾಗಿತ್ತು. ಏ.1ರಿಂದ 24ರವರೆಗೆ 135 ಕೋಟಿ ರೂ. ತೆರಿಗೆ ಪಾವತಿಯಾಗಿದೆ. ಕಳೆದ ವರ್ಷ ಏಪ್ರಿಲ್ ಅಂತ್ಯಕ್ಕೆ 502 ಕೋಟಿ ರೂ. ಪಾವತಿಯಾಗಿತ್ತು. ಪ್ರತಿ ವರ್ಷ ಬ್ಯಾಂಕ್​ಗಳ ಮೂಲಕ ಆಸ್ತಿ ತೆರಿಗೆ ಪಾವತಿಸುತ್ತಿದ್ದವರು ಈ ವರ್ಷ ಲಾಕ್​ಡೌನ್ ಕಾರಣದಿಂದ ಪಾವತಿ ಮಾಡಿಲ್ಲ. ಹೀಗಾಗಿ ತೆರಿಗೆ ಪಾವತಿ ಪ್ರಮಾಣ ಕಡಿಮೆಯಾಗಿದೆ. ಲಾಕ್​ಡೌನ್​ನಿಂದ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮೇ 31ರವರೆಗೆ ಆಸ್ತಿ ತೆರಿಗೆ ರಿಯಾಯಿತಿ ನಿರೀಕ್ಷೆ ಮಾಡುತ್ತಿದ್ದರು.

ಕೌನ್ಸಿಲ್​ನಲ್ಲಿ ತೀರ್ವನವಿಲ್ಲ: ವಿಡಿಯೋ ಕಾನ್ಪರೆನ್ಸ್ ಮೂಲಕ ಏ.20 ರಂದು ಬಿಬಿಎಂಪಿ ಆಯವ್ಯಯ ಮಂಡನೆ ಹಾಗೂ 22ರಂದು ಬಿಬಿಎಂಪಿ ಆಯವ್ಯಯ ಕುರಿತ ಚರ್ಚೆಗೆ ಸದಸ್ಯರಿಗೆ ಅವಕಾಶ ನೀಡಲಾಗಿತ್ತು. ಆದರೆ, ಪಾಲಿಕೆ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಪಾವತಿಸುವವರಿಗೆ ರಿಯಾಯಿತಿ ನೀಡುವ ಬಗ್ಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲಹೆ ನೀಡಿರಲಿಲ್ಲ. ಈ ಕಾರಣದಿಂದ ಚರ್ಚೆ ನಡೆದಿಲ್ಲ ಎನ್ನಲಾಗಿದೆ.

ಆಯುಕ್ತರ ಟ್ವೀಟ್​ಗೆ ಜನರ ಶಾಕ್: ಏ. 30ರೊಳಗಾಗಿ ಆಸ್ತಿ ತೆರಿಗೆ ಪಾವತಿ ಮಾಡಿದರೆ ಶೇ.5 ರಿಯಾಯಿತಿ ದೊರೆಯುತ್ತದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಲಾಕ್​ಡೌನ್ ವೇಳೆ ವ್ಯವಹಾರವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಜನರು ಆಯುಕ್ತರ ಟ್ವೀಟ್​ನಿಂದ ಗಲಿಬಿಲಿಯಾಗಿದ್ದಾರೆ. ಕೆಲವರು ಕಂಪ್ಯೂಟರ್ ಜ್ಞಾನ ಇರುವವರ ಬಳಿ ಆನ್​ಲೈನ್ ತೆರಿಗೆ ಪಾವತಿಗೆ ಮುಂದಾದರೆ, ಇನ್ನು ಕೆಲವರು ಹಣವಿಲ್ಲದಿರುವಾಗ ಹೇಗೆ ತೆರಿಗೆ ಪಾವತಿಒಸಬೇಕು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಏ.30ರವರೆಗೆ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಶೇ.5 ರಿಯಾಯಿತಿ ನೀಡಲಾಗುತ್ತಿದೆ. ಆದನ್ನು ವಿಸ್ತರಣೆ ಮಾಡುವ ಬಗ್ಗೆ ಕೌನ್ಸಿಲ್ ತೀರ್ಮಾನ ತೆಗೆದುಕೊಳ್ಳಲಿದೆ.

| ಬಿ.ಎಚ್. ಅನಿಲ್ ಕುಮಾರ್ ಬಿಬಿಎಂಪಿ ಆಯುಕ್ತ