ಜಿಲ್ಲೆ

ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಮಂಡಳಿ - ನಾಳೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ

shastrimath

ವಿಜಯವಾಣಿ/ದಿಗ್ವಿಜಯ ಫೋನ್​ಇನ್​ನಲ್ಲಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಘೋಷಣೆ

ಬೆಂಗಳೂರು : ರಾಜಧಾನಿಯ ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಡುತ್ತಿರುವ ತ್ಯಾಜ್ಯ ನಿರ್ವಹಣೆಯನ್ನು ಬಿಬಿಎಂಪಿಯಿಂದ ಪ್ರತ್ಯೇಕಗೊಳಿಸಿ ಸ್ವಾಯತ್ತ ಸಂಸ್ಥೆಯೊಂದನ್ನು ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. ವಿಜಯವಾಣಿ ಮತ್ತು ದಿಗ್ವಿಜಯ 24X7 ನ್ಯೂಸ್’ ಶನಿವಾರ ಏರ್ಪಡಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಲೇ ಈ ಮಾಹಿತಿ ನೀಡಿದರು.

ಸಿಲಿಕಾನ್ ಸಿಟಿ ವಿಸ್ತಾರ 800 ಚ.ಕಿ.ಮೀ ವರೆಗೆ ವಿಸ್ತರಣೆಯಾಗಿದ್ದು, ಸುಮಾರು 1.20 ಕೋಟಿ ಜನಸಂಖ್ಯೆ ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗರ ಬೆಳವಣಿಗೆ ಆಗುತ್ತಿರುವುದರಿಂದ ಮೂಲಸೌಕರ್ಯ ಒದಗಿಸುವುದು ಸವಾಲಿನ ಕಾರ್ಯವಾಗಿದೆ. ನಗರದ ತ್ಯಾಜ್ಯ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತಿದ್ದು ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್​ಎಸ್​ಬಿ) ಮಾದರಿಯಲ್ಲಿ ಪ್ರತ್ಯೇಕ ಘನತ್ಯಾಜ್ಯ ನಿರ್ವಹಣಾ ಮಂಡಳಿ ಆರಂಭಿಸುವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೋಮವಾರ ಪ್ರಸ್ತಾವನೆ ಕಳುಹಿಸುವುದಾಗಿ ಮಂಜುನಾಥ್ ಪ್ರಸಾದ್ ತಿಳಿಸಿದರು.

ಇದನ್ನೂ ಓದಿ: ತಾಯಿಯೇ ಹಂತಕಿಯಾದಾಗ…: ಡಾ.ಡಿ.ವಿ.ಗುರುಪ್ರಸಾದ್ ಅವರ ಆ ಕ್ಷಣ.. ಅಂಕಣಮೂಲಸೌಕರ್ಯಕ್ಕೆ ತ್ಯಾಜ್ಯ ಹೊರೆ

ಆರೋಗ್ಯ, ಸಾರಿಗೆ, ಶಿಕ್ಷಣ, ಬೀದಿ ದೀಪ, ಆಸ್ತಿಗಳು, ಉದ್ಯಮಗಳ ನಿರ್ವಹಣೆ ಜತೆಗೆ ಪ್ರತಿನಿತ್ಯ ಉತ್ಪಾದನೆಯಾಗುತ್ತಿರುವ ಸುಮಾರು 4,500 ಟನ್ ತ್ಯಾಜ್ಯ ನಿರ್ವಹಣೆ ಹೊರೆಯಾಗಿ ಕಾಡುತ್ತಿದೆ.

10 ಲಕ್ಷಕ್ಕೂ ಅಧಿಕ ತ್ಯಾಜ್ಯ ಉತ್ಪಾದನಾ ಕೇಂದ್ರಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಜತೆಗೆ ರಸ್ತೆಗಳು, ಉದ್ಯಾನಗಳು, ಮಾರುಕಟ್ಟೆಗಳು ಹಾಗೂ ಬ್ಲಾಕ್ ಸ್ಪಾಟ್​ಗಳಿಂದ ಹೆಚ್ಚುವರಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಈ ಎಲ್ಲ ತ್ಯಾಜ್ಯದ ವಿಲೇವಾರಿ ಮತ್ತು ನಿರ್ವಹಣೆಗೆ ಕೇವಲ 50 ಕೋಟಿ ರೂ. ವಾರ್ಷಿಕ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಆದರೆ, ತ್ಯಾಜ್ಯ ನಿರ್ವಹಣೆಗೆ ವಾರ್ಷಿಕ ಶೇ.190 ಪಟ್ಟು ಹೆಚ್ಚು ಅಂದರೆ ಸುಮಾರು 1 ಸಾವಿರ ಕೋಟಿ ರೂ.ಗಿಂತ ಅಧಿಕ ವೆಚ್ಚ ಮಾಡಲಾಗುತ್ತಿದೆ. ಇದರಿಂದ ನಗರದ ಜನತೆಗೆ ಮೂಲ ಸೌಕರ್ಯ ಒದಗಿಸಲು ಹೆಚ್ಚು ಆರ್ಥಿಕ ಹೊರೆ ಆಗುತ್ತಿದೆ. ತ್ಯಾಜ್ಯ ನಿರ್ವಹಣೆ ಎಂಬುದು ಕೇವಲ ಸಂಗ್ರಹ ಹಾಗೂ ಸಾಗಣೆಗೆ ಸೀಮಿತವಾಗಿಲ್ಲ. ಹಸಿ ಕಸ, ಒಣ ಕಸದ ಜತೆಗೆ ವೈದ್ಯಕೀಯ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಸೇರಿ ಅನೇಕ ವಿಧಗಳಿವೆ. ಅವುಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ಜತೆಗೆ ಕಸದಿಂದ ವಿದ್ಯುತ್, ಗೊಬ್ಬರ ಉತ್ಪಾದನೆ ಮಾಡಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಸಿಮೆಂಟ್ ಮತ್ತು ಡಾಂಬರ್ ಉತ್ಪಾದನೆ ಕಾರ್ಯಕ್ಕೆ, ಮಾಂಸದ ತ್ಯಾಜ್ಯವನ್ನು ಮೀನಿನ ಆಹಾರ ಉತ್ಪಾದನೆಗೆ ಸೇರಿ ವಿವಿಧ ವಿಭಾಗದಲ್ಲಿ ಬಳಕೆ ಮಾಡಲಾಗುತ್ತಿದೆ. ಸಂಗ್ರಹದಿಂದ ಅಂತಿಮ ಹಂತದ ನಿರ್ವಹಣೆವರೆಗೆ ತ್ಯಾಜ್ಯ ಎಂಬುದು ಒಂದು ದೊಡ್ಡ ಕ್ಷೇತ್ರವಾಗಿ ಬೆಳೆದಿದೆ. ಇದಕ್ಕಾಗಿಯೇ ಕಾರ್ಯತತ್ಪರವಾದ ಸ್ವಾಯತ್ತ ಸಂಸ್ಥೆಯಿದ್ದರೆ ವೃತ್ತಿಪರತೆ ಬರಲಿದೆ. ಜಲಮಂಡಳಿಯಲ್ಲಿ ಆದಷ್ಟು ಶೀಘ್ರವಾಗಿ ಬಿಬಿಎಂಪಿಯಲ್ಲಿ ನಿರ್ಧಾರಗಳು ಆಗುವುದಿಲ್ಲ. ಈ ಕೊರತೆಯನ್ನೂ ನೀಗಬಹುದು ಎಂಬುದು ಬಿಬಿಎಂಪಿ ಅಧಿಕಾರಿಗಳ ಅಭಿಪ್ರಾಯ.

ತ್ಯಾಜ್ಯ ನಿರ್ವಹಣೆ ಎಂಬುದು ಬೃಹತ್ ಕ್ಷೇತ್ರವಾಗಿ ವಿಕಸನಗೊಂಡಿದ್ದು, ವೃತ್ತಿಪರ ಏಜೆನ್ಸಿಗಳ ರೀತಿಯಲ್ಲಿ ಸ್ವಾಯತ್ತ ಸಂಸ್ಥೆಯಿಂದ ನಡೆಸುವುದು ಉತ್ತಮ. ಇದರಿಂದಾಗಿ, ಬಿಬಿಎಂಪಿಯು ತನ್ನ ಮೂಲ ಕೆಲಸಗಳಾದ ಮೂಲಸೌಕರ್ಯದತ್ತ ಹೆಚ್ಚಿನ ಗಮನ ನೀಡಲು ಸಾಧ್ಯ. ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. | ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ

ಇದನ್ನೂ ಓದಿ: 2021ರಲ್ಲಿ 269 ದಿನವಷ್ಟೇ ಸರ್ಕಾರಿ ಕಚೇರಿ! – ಸರ್ಕಾರಿ ನೌಕರರಿಗೆ 19 ಪರಿಮಿತ ರಜೆ ಗಿಫ್ಟ್ ನೀಡಿದ ರಾಜ್ಯ ಸರ್ಕಾರ ಶೀಘ್ರ ನಿರ್ಧಾರ ಸಾಧ್ಯತೆ ಬಿಬಿಎಂಪಿಯಲ್ಲಿ ಮಾಜಿ ಮೇಯರ್​ಗಳು, ತಜ್ಞ ಅಧಿಕಾರಿಗಳು, ಹಿರಿಯ ಪಾಲಿಕೆ ಸದಸ್ಯರನ್ನೊಳಗೊಂಡ ಸಮಿತಿ ಹಲವು ಮಹಾನಗರಗಳ ತ್ಯಾಜ್ಯ ವಿಲೇವಾರಿ ಕ್ರಮ ಅಧ್ಯಯನ ಮಾಡಿ ಹಸಿಕಸ ಸಂಗ್ರಹ ಯೋಜನೆಯನ್ನು 2019ರಲ್ಲಿ ಜಾರಿಗೊಳಿಸಲಾಯಿತು. ಆದರೆ, ಇದಕ್ಕೆ ಪಾಲಿಕೆ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ, ಯೋಜನೆ ಜಾರಿ ತಡೆಹಿಡಿಯಲಾಗಿತ್ತು. ಈ ಕುರಿತು ಗುತ್ತಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ನ್ಯಾಯಾಲಯ ತೀರ್ಪಿನ ಅನುಸಾರ 2020 ಜುಲೈನಿಂದ ಜಾರಿಗೆ ತಂದಿದೆ. ಆದರೂ, ಪ್ರಸ್ತುತ ಕೇವಲ 40 ವಾರ್ಡ್​ಗಳಲ್ಲಿ ಮಾತ್ರ ಹಸಿಕಸ ಸಂಗ್ರಹಣಾ ಯೋಜನೆ ಜಾರಿಯಲ್ಲಿದೆ. ಪ್ರತ್ಯೇಕ ತ್ಯಾಜ್ಯ ನಿರ್ವಹಣಾ ಮಂಡಳಿಯಿದ್ದಲ್ಲಿ ಎಲ್ಲ ಕಾರ್ಯಗಳು ಶೀಘ್ರ ನಡೆಯುತ್ತವೆ ಎಂಬ ಅಭಿಪ್ರಾಯ ಬಿಬಿಎಂಪಿ ಅಧಿಕಾರಿಗಳದ್ದು.