ತಾಯಿಯೇ ಹಂತಕಿಯಾದಾಗ...: ಡಾ.ಡಿ.ವಿ.ಗುರುಪ್ರಸಾದ್ ಅವರ ಆ ಕ್ಷಣ.. ಅಂಕಣ

Murder Aa Kshana 7 June 20
Published on
ಉತ್ತರ ಕರ್ನಾಟಕದ ನಗರವೊಂದರಲ್ಲಿ ಶಂಕರ್ ಎನ್ನುವವನು ಖಾಸಗಿ ಸಂಸ್ಥೆಯೊಂದರ ಕ್ಯಾಬ್ ಚಾಲಕನಾಗಿದ್ದ. ಆತ ತನ್ನ ಗ್ರಾಮದವಳೇ ಆದ ಸುನೀತಾಳನ್ನು ಲಗ್ನವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಜೀವನ ಸುಖದಿಂದಲೇ ಸಾಗಿದ್ದು, ಇದರ ಕಿರೀಟವೆಂಬಂತೆ ಅವರಿಗೆ ಹೆಣ್ಣು ಮಗುವಿನ ಜನನವಾಯಿತು. ಮಗುವಿಗೆ ರೇಷ್ಮಾ ಎಂದು ನಾಮಕರಣ ಮಾಡಿದರು.

ತನ್ನ ಕ್ಯಾಬ್ ಸಂಸ್ಥೆಯಲ್ಲಿಯೇ ಕೆಲಸಮಾಡುತ್ತಿದ್ದ ಇನ್ನೊಬ್ಬ ಚಾಲಕ ಮೋಹನ್​ನ ಜತೆಗೆ ಶಂಕರ್ ಗೆಳೆತನ ಬೆಳೆಸಿದ್ದ. ಸುಮಾರು 27 ವರ್ಷ ವಯಸ್ಸಿನ ಮೋಹನ್ ಸ್ಪುರದ್ರೂಪಿಯಾಗಿದ್ದು ಆತನಿಗೆ ಇನ್ನೂ ಮದುವೆಯಾಗಿರಲಿಲ್ಲ. ಮೋಹನ್ ವಾರಕ್ಕೊಮ್ಮೆಯಾದರೂ ಶಂಕರನ ಮನೆಗೆ ಬಂದು ಶಂಕರನ ಜತೆ ಮದ್ಯಪಾನ ಮಾಡಿ ರಾತ್ರಿಯೂಟವನ್ನು ಅಲ್ಲಿಯೇ ಮಾಡುತ್ತಿದ್ದ. ತನ್ನ ನಾಜೂಕಾದ ಮಾತುಗಳು ಮತ್ತು ನಗೆಚಟಾಕಿಗಳಿಂದ ಆತ ಬೇಗನೇ 26 ವರ್ಷದ ಸುನೀತಾಳನ್ನು ಆಕರ್ಷಿಸಿದ. ತನ್ನ ಗಂಡನಿಗಿಂತಲೂ ನೋಡಲು ಸುಂದರವಾಗಿದ್ದು, ಶ್ರೀಮಂತನಾಗಿದ್ದಾನೆಂದು ಮನಗಂಡ ಸುನೀತಾ ಅವನಿಗೆ ಮನಸೋತಳು. ಇಬ್ಬರಲ್ಲಿಯೂ ಸಲುಗೆ ಬೆಳೆಯಿತು.

ಕ್ರಮೇಣ ಮೋಹನ ಮತ್ತು ಸುನೀತಾರ ಅನ್ಯೋನ್ಯತೆ ದೈಹಿಕ ಸಂಪರ್ಕಕ್ಕೆ ತಿರುಗಿತು. ಶಂಕರನಿಗೆ ತಿಳಿಯದ ರೀತಿಯಲ್ಲಿ ಇಬ್ಬರೂ ಸಂಧಿಸುತ್ತಿದ್ದರು. ಶಂಕರ್ ಪರ ಊರುಗಳಿಗೂ ಟ್ಯಾಕ್ಸಿ ತೆಗೆದುಕೊಂಡು ಹೋಗಬೇಕಾಗಿದ್ದ ಕಾರಣ ಆತ ಊರಲ್ಲಿಲ್ಲದ ಸಮಯದಲ್ಲಿ ಮೋಹನ ಸುನೀತಾಳ ಮನೆಗೇ ಬರುತ್ತಿದ್ದ. ಈ ಸಂಬಂಧದ ಬಗ್ಗೆ ಅಕ್ಕಪಕ್ಕದವರು ಗುಸುಗುಸು ಮಾತನಾಡತೊಡಗಿದರು.

ಕೆಲಕಾಲದ ನಂತರ ಶಂಕರ್​ನಿಗೂ ಪತ್ನಿಯ ಅನೈತಿಕ ವ್ಯವಹಾರದ ಬಗ್ಗೆ ತಿಳಿದು ತರಾಟೆಗೆ ತೆಗೆದುಕೊಂಡ. ಸುನೀತಾ ಈ ಆರೋಪವನ್ನು ಬಲವಾಗಿ ಅಲ್ಲಗಳೆದು ರಂಪಾಟ ಮಾಡಿದಳು. ಶಂಕರ್ ಅವಳ ಮಾತಾಪಿತರನ್ನು ಮನೆಗೆ ಕರೆಸಿ ಸುನೀತಾಗೆ ಬುದ್ಧಿಹೇಳಲು ವಿನಂತಿಸಿದ. ಆತ ಮೋಹನ್​ನ ಗೆಳೆತನವನ್ನು ತ್ಯಜಿಸಿ ಇನ್ನು ಮುಂದೆ ತನ್ನ ಮನೆಯ ಬಳಿ ಸುಳಿಯದಂತೆ ತಾಕೀತು ಮಾಡಿದ. ಇಷ್ಟೆಲ್ಲಾ ಆದರೂ ಸುನೀತಾಳಿಗೆ ಮೋಹನ್​ನನ್ನು ತ್ಯಜಿಸಲಾಗಲಿಲ್ಲ. ಕೊನೆಗೆ ಶಂಕರ್ ‘ನಿನಗೆ ನನಗಿಂತ ಮೋಹನನೇ ಹೆಚ್ಚಾಗಿರುವ ಕಾರಣ ಅವನ ಜೊತೆಯೇ ಸಂಸಾರ ಮಾಡು’ ಎಂದು ಅವಳನ್ನು ಮನೆಯಿಂದ ಹೊರಹಾಕಿದ. ಸುನೀತಾ ಮರುಮಾತಾಡದೆ ರೇಷ್ಮಾಳನ್ನೂ ಕರೆದುಕೊಂಡು ತನ್ನ ತವರಿಗೆ ಹೋದಳು.

ಸುನೀತಾಳ ತವರು ಮನೆಯವರು ಆಕೆಗೆ ಬೈದು, ಶಂಕರನ ಕ್ಷಮೆ ಕೋರಿ ಅವನೊಡನೆಯೇ ಜೀವನ ಮಾಡಲು ತಾಕೀತು ಮಾಡಿದರು. ನಾಲ್ಕು ವಾರ ತವರು ಮನೆಯಲ್ಲಿ ಕಳೆದ ಸುನೀತಾ ಗಂಡನ ಮನೆಗೆ ವಾಪಸಾಗುವುದಾಗಿ ತಿಳಿಸಿ ಅಲ್ಲಿಗೆ ಹೋಗದೆ ಮೋಹನನನ್ನು ಸಂರ್ಪಸಿ ಆಶ್ರಯ ಕೋರಿದಳು. ಆತ ಊರ ಹೊರಗಿನ ಬಡಾವಣೆಯೊಂದರಲ್ಲಿ ಸಣ್ಣ ಮನೆ ಬಾಡಿಗೆಗೆ ಪಡೆದು ಅಲ್ಲಿ ಅವಳನ್ನಿಟ್ಟ.

ಒಂದೆರಡು ತಿಂಗಳ ನಂತರ ‘ಎಷ್ಟು ದಿನ ಹೀಗೆಯೇ ಜೀವಿಸುವುದು, ಇಬ್ಬರೂ ಲಗ್ನವಾಗೋಣ’ ಎಂದು ಸುನೀತಾ ಸೂಚಿಸಿದಾಗ ಮೋಹನ ಸುಮ್ನಿದ್ದ. ಆದರೆ ಆಕೆ ಪದೇಪದೆ ಪೀಡಿಸತೊಡಗಿದಾಗ ಮೋಹನ ‘ಒಂದು ಮಗುವಿನ ತಾಯಿಯನ್ನು ಸಮಾಜದ ಎದುರು ನಾನು ಹೇಗೆ ಪತ್ನಿಯನ್ನಾಗಿ ಮಾಡಿಕೊಳ್ಳಲಿ? ಮದುವೆಯಾಗದಿದ್ದರೇನಾಯಿತು, ನಮ್ಮ ಸಂಬಂಧವನ್ನು ಹೀಗೆಯೇ ಮುಂದುವರಿಸೋಣ’ ಎಂದ.

ಮೋಹನನ ಮಾತುಗಳನ್ನೇ ಕೆಲವು ದಿನ ಮೆಲುಕು ಹಾಕಿದ ಸುನೀತಾಳಿಗೆ ತಾನು ಒಂದು ವೇಳೆ ರೇಷ್ಮಾಳ ತಾಯಿಯಾಗದೇ ಹೋಗಿದ್ದರೆ ಮೋಹನ ತನ್ನನ್ನು ಲಗ್ನಮಾಡಿಕೊಳ್ಳುತ್ತಿದ್ದನೇನೋ ಎನ್ನುವ ಭಾವನೆ ಬಲವಾಗತೊಡಗಿತು. ಆಗ ರೇಷ್ಮಾಗೆ ಸುಮಾರು 15 ತಿಂಗಳುಗಳಾಗಿದ್ದವು. ಈ ಮಗುವನ್ನೇ ಕೊಂದರೆ ಮೋಹನ ತನ್ನನ್ನು ವಿವಾಹವಾಗಲು ಒಪ್ಪಬಹುದು ಎಂದು ರ್ತಸಿ ರೇಷ್ಮಾಳನ್ನೇ ಕೊಲ್ಲುವ ಯೋಜನೆ ಹಾಕಿದಳು.

ಒಂದು ತಡರಾತ್ರಿ ರೇಷ್ಮಾ ತನ್ನ ಪಕ್ಕದಲ್ಲಿ ಮಂಚದ ಮೇಲೆ ಮಲಗಿದ್ದಾಗ ಅವಳನ್ನು ಎತ್ತಿಕೊಂಡ ಸುನೀತಾ ಅವಳ ತಲೆಯನ್ನು ಮೂರು ಬಾರಿ ಜೋರಾಗಿ ಗೋಡೆಗೆ ಜಜ್ಜಿದಳು. ರೇಷ್ಮಾಳ ತಲೆಯಿಂದ ಬಳಬಳನೆ ರಕ್ತ ಸುರಿಯತೊಡಗಿತು. ಆಕೆ ನೋವಿನಿಂದ ಜೋರಾಗಿ ಅಳತೊಡಗಿದಾಗ ಸುನೀತಾ ಮಗಳ ಎದೆಯ ಮೇಲೆ ಕುಳಿತು ಉಸಿರುಗಟ್ಟಿಸಿ ಕೊಂದಳು. ಆನಂತರ ಒದ್ದೆಬಟ್ಟೆಯನ್ನು ತೆಗೆದುಕೊಂಡು ಗೋಡೆಯ ಮೇಲಿದ್ದ ರಕ್ತವನ್ನು ತೊಳೆದು, ಮನೆಯಿಂದ ಹೊರಗೆ ಬಂದು, ‘ನನ್ನ ಮಗು ಮಂಚದಿಂದ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದೆ, ದಯವಿಟ್ಟು ಸಹಾಯ ಮಾಡಿ’ ಎಂದು ಜೋರಾಗಿ ಅಳುತ್ತಾ ನೆರೆಹೊರೆಯವರನ್ನು ಕರೆದಳು.

ಆಗ ಇನ್ನೇನು ಬೆಳಕಾಗುತ್ತಿತ್ತು. ನೆರೆಹೊರೆಯವರು ರೇಷ್ಮಾಳನ್ನು ನೋಡಿ ಆಕೆ ಸತ್ತಿದ್ದಾಳೆ ಎಂದು ಹೇಳಿದರೂ ಮಗುವನ್ನು ಆಸ್ಪತ್ರೆಗೆ ಒಯ್ಯೋಣವೆಂದು ಸುನೀತಾ ಬಲವಂತ ಮಾಡಿದಳು. ಮಗುವನ್ನು ಪರೀಕ್ಷಿಸಿದ ವೈದ್ಯರು ಅದು ಈಗಾಗಲೇ ಮೃತಪಟ್ಟಿದೆ ಎಂದು ಅವರನ್ನು ವಾಪಸ್ ಕಳಿಸಿದರು. ಮನೆಗೆ ವಾಪಸ್ಸಾದ ಸುನೀತಾ ಕೂಡಲೇ ಹೊಲವೊಂದಕ್ಕೆ ಹೋಗಿ ರೇಷ್ಮಾಳ ಶವವನ್ನು ದಫನ್ ಮಾಡಿದಳು. ಆನಂತರ ತನ್ನ ಮಾತಾಪಿತರಿಗೂ, ಅತ್ತೆ ಮಾವಂದಿರಿಗೂ ಮತ್ತು ಗಂಡ ಶಂಕರನಿಗೂ ರೇಷ್ಮಾ ಮಂಚದಿಂದ ಕೆಳಗೆ ಬಿದ್ದು ತಲೆಗೆ ಗಾಯಮಾಡಿಕೊಂಡು ಸತ್ತಳೆಂದು ತಿಳಿಸಿದಳು.

ರೇಷ್ಮಾಳ ಅಂತ್ಯಸಂಸ್ಕಾರ ಮಾಡುವ ಮೊದಲು ತಮಗೇಕೆ ತಿಳಿಸಲಿಲ್ಲ ಎಂದು ಅವರು ಪ್ರಶ್ನಿಸಿದಾಗ ಸುನೀತಾ ಸೂಕ್ತ ಉತ್ತರ ಕೊಡಲಿಲ್ಲ. ಶಂಕರನೂ ಹೆಚ್ಚು ಪ್ರಶ್ನಿಸಲು ಹೋಗಲಿಲ್ಲ. ಆದರೆ ಸುನೀತಾಳ ತಾಯಿ ಬಸಮ್ಮಳಿಗೆ ಮಾತ್ರ ಅನುಮಾನ ಬಲವಾಯಿತು. ಮಂಚದಿಂದ ಮಕ್ಕಳು ಕೆಳಗೆ ಬೀಳುವುದು ಸಾಮಾನ್ಯ, ಆದರೆ ಕೆಳಗೆ ಬಿದ್ದ ಏಟಿಗೆ ಮಕ್ಕಳು ಸಾಯುವುದು ವಿರಳ ಎಂದು ಆಕೆ ತಿಳಿದಿದ್ದಳು. ಇದಲ್ಲದೆ ಅವಸರವಸರದಿಂದ ಮಗುವಿನ ಅಂತ್ಯಸಂಸ್ಕಾರ ಮಾಡಿದ್ದು ಬಸಮ್ಮಳ ಅನುಮಾನವನ್ನು ಹೆಚ್ಚಿಸಿತ್ತು. ತನ್ನ ಮಗಳು ಶಂಕರನನ್ನು ಬಿಟ್ಟು ಬಂದಿದ್ದು ಆಕೆಗೆ ಸ್ವಲ್ಪವೂ ಸರಿಬಂದಿರದೆ ಮಗಳ ಚಾರಿತ್ರ್ಯದ ಬಗ್ಗೆಯೂ ಬೇಸತ್ತಿದ್ದಳು. ಆಕೆ ನಾನಾ ರೀತಿಯಲ್ಲಿ ಸುನೀತಾಳನ್ನು ರೇಷ್ಮಾಳ ಸಾವಿನ ಬಗ್ಗೆ ಪ್ರಶ್ನಿಸತೊಡಗಿದಳು. ಆಕೆ ಸಮರ್ಪಕ ಉತ್ತರಗಳನ್ನು ಕೊಡದಿದ್ದಾಗ, ಬಸಮ್ಮ ಸುನೀತಾಳಿದ್ದ ಊರಿಗೇ ಹೋಗಿ ಅಲ್ಲಿನ ಪೊಲೀಸ್ ಠಾಣೆಯಲ್ಲಿ ತನ್ನ ಮೊಮ್ಮಗಳ ಸಾವಿನ ಬಗ್ಗೆ ಅನುಮಾನವಿದೆ, ತನಿಖೆಯಾಗಬೇಕು ಎಂದು ದೂರನ್ನು ಕೊಟ್ಟಳು. ಆದರೆ ಪೊಲೀಸರು ದೂರನ್ನು ಸ್ವೀಕರಿಸಲೇ ಇಲ್ಲ. ಬಸಮ್ಮ ಆ ನಗರದ ಪೊಲೀಸ್ ಮುಖ್ಯಸ್ಥರನ್ನೇ ಭೇಟಿಯಾಗಿ ದೂರು ನೀಡಿದಳು. ಅಸ್ವಾಭಾವಿಕ ಸಾವಿನ ದೂರನ್ನು ದಾಖಲಿಸಲು ಆ ಅಧಿಕಾರಿ ಸೂಚಿಸಿದರು. ಶವವನ್ನು ಹೊರತೆಗೆಯಲು ಮ್ಯಾಜಿಸ್ಟ್ರೇಟರ ಪರವಾನಗಿ ಬೇಕಾಗಿತ್ತು. ಆ ವೇಳೆಗಾಗಲೇ ರೇಷ್ಮಾ ಸತ್ತು ಐದು ತಿಂಗಳುಗಳಾಗಿದ್ದವು. ಶವವನ್ನು ಹೊರತೆಗೆದು ಪಂಚನಾಮೆ ಮಾಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಶವಪರೀಕ್ಷೆಗೆ ಕಳುಹಿಸಲಾಯಿತು.

ಮಗುವಿನ ತಲೆಗೆ ನಾಲ್ಕು ಜಾಗಗಳಲ್ಲಿ ಭಾರಿ ಪೆಟ್ಟಾಗಿದ್ದು ತೀವ್ರ ರಕ್ತಸ್ರಾವವಾಗಿದೆ, ಇದಲ್ಲದೆ ಆ ಕೂಸಿನ ನಾಲ್ಕು ಪಕ್ಕೆಲುಬುಗಳು ಮುರಿದಿವೆ, ಆಂತರಿಕ ರಕ್ತಸ್ರಾವದಿಂದಾಗಿ ರೇಷ್ಮಾಳ ಸಾವು ಸಂಭವಿಸಿದೆ. ಶವದ ಮೇಲಾಗಿದ್ದ ಗಾಯಗಳು ಮಲಗಿದ್ದ ಮಂಚದಿಂದ ಕೆಳಗೆ ಬಿದ್ದರೆ ಆಗುವಂತಹ ಗಾಯಗಳಲ್ಲ, ಮಗುವಿನ ತಲೆಯು ಸೀಳಿದ್ದು ಪಕ್ಕೆಲುಬುಗಳು ಮುರಿದಿರುವುದರಿಂದ ಇದು ಕೊಲೆಯೆನ್ನುವುದರಲ್ಲಿ ಸಂದೇಹವಿಲ್ಲ ಎಂದು ವೈದ್ಯರು ವರದಿ ನೀಡಿದರು. ಸುನೀತಾಳ ವಿರುದ್ಧ ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣ ದಾಖಲಾಯಿತು.

ಪೊಲೀಸರು ಸುನೀತಾಳ ಮನೆಗೆ ಹೋದಾಗ, ಗೋಡೆಗೆ ಹತ್ತಿದ್ದ ರಕ್ತದ ಕಲೆಯನ್ನು ಅಳಿಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಗೋಚರಿಸಿತು. ಗೋಡೆಯ ಮೇಲಿನ ಸುಣ್ಣವನ್ನು ಹೆರೆದು ತೆಗೆದು ರಾಸಾಯನಿಕ ಪರೀಕ್ಷೆಗೆ ಒಳಪಡಿಸಲಾಯಿತು. ಮೋಹನನನ್ನು ಲಗ್ನವಾಗುವ ಉದ್ದೇಶದಿಂದಲೇ ತನ್ನ ಮಗುವಿನ ಕೊಲೆ ಮಾಡಿದ್ದಾಗಿ ಸುನೀತಾ ಒಪ್ಪಿಕೊಂಡಳು. ಮೋಹನನನ್ನು ಕೇಳಿದಾಗ ತನಗೆ ಸುನೀತಾಳನ್ನು ಲಗ್ನವಾಗುವ ಉದ್ದೇಶವೇ ಇಲ್ಲ, ತಾನು ಅವಳ ಮನೆಗೂ ಹೋಗುವುದನ್ನು ನಿಲ್ಲಿಸಿರುವೆ ಎಂದ.

ಗೋಡೆಯ ಮೇಲಿದ್ದ ಸುಣ್ಣದಲ್ಲಿ ಮಾನವನ ರಕ್ತದ ಕಲೆಗಳಿದ್ದುದು ಪರೀಕ್ಷೆಯಿಂದ ಸಾಬೀತಾದ ನಂತರ ನ್ಯಾಯಾಲಯದಲ್ಲಿ ಸುನೀತಾಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ಕೊಲೆಗೆ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇರದ ಕಾರಣ ಇಡೀ ಪ್ರಕರಣ ಸಾಂರ್ದಭಿಕ ಸಾಕ್ಷ್ಯದ ಮೇಲೆ ಅವಲಂಬಿತವಾಗಿತ್ತು. ಶವಪರೀಕ್ಷೆ ಮಾಡಿದ ವೈದ್ಯರ ಸಾಕ್ಷ್ಯವು ನಿರ್ಣಾಯಕವಾಯಿತು. ಗೋಡೆಯ ಮೇಲಾಗಿದ್ದ ರಕ್ತದ ಕಲೆಗಳನ್ನು ಅಳಿಸುವ ಪ್ರಯತ್ನ, ಶವವನ್ನು ಅವಸರವಸರದಲ್ಲಿ ಹುಗಿದಿದ್ದು ಮುಂತಾದವುವಳನ್ನು ಪರಿಗಣಿಸಿದ ನ್ಯಾಯಾಲಯವು ಮಗುವನ್ನು ರಕ್ಷಿಸಬೇಕಾದ ತಾಯಿಯೇ ಈ ಘೊರಕೃತ್ಯ ಮಾಡಿದ ಕಾರಣ ಆಕೆ ತಪ್ಪಿತಸ್ಥಳೆಂದು ತೀರ್ವನಿಸಿತು. ತನ್ನ ಮೇಲೆ ಕರುಣೆ ತೋರಿಸಲು ಸುನೀತಾ ಸಲ್ಲಿಸಿದ ಕೋರಿಕೆಯನ್ನು ತಳ್ಳಿಹಾಕಿದ ನ್ಯಾಯಾಲಯ ಆಕೆಗೆ ಆಜೀವಪರ್ಯಂತ ಕಾರಾಗೃಹ ಶಿಕ್ಷೆ ವಿಧಿಸಿತು.

‘ಮಕ್ಕಳು ಮುಗ್ಧರಾಗಿದ್ದು ನ್ಯಾಯವನ್ನು ಪ್ರೀತಿಸಿದರೆ ಬಹುತೇಕ ವಯಸ್ಕರು ದುಷ್ಟರಾಗಿದ್ದು ಕರುಣೆಯನ್ನು ಅಪೇಕ್ಷಿಸುತ್ತಾರೆ’ ಎಂಬ ಖ್ಯಾತ ಆಂಗ್ಲ ಸಾಹಿತಿ ಜಿ.ಕೆ.ಚೆಸ್ಟರ್​ಟನ್​ನ ಮಾತುಗಳು ನಿಜವಲ್ಲವೇ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net