ಜಿಲ್ಲೆ

ಬಿಬಿಎಂಪಿ ಬಜೆಟ್ ಮಂಡನೆಗೆ ದಿನ ನಿಗದಿ: ಸಿಎಂಗೆ ಆಯವ್ಯಯ ಪಟ್ಟಿ ಸಲ್ಲಿಕೆ

Webdesk - Ravikanth

ಬೆಂಗಳೂರು: ಬಹುನಿರೀಕ್ಷಿತ ಬಿಬಿಎಂಪಿ ಬಜೆಟ್ ಮಂಡನೆಗೆ ಮಾ.3ಕ್ಕೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದೆ. ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಮಂಡನೆ ಬಳಿಕ ಪಾಲಿಕೆಯ ಆಯವ್ಯಯ ಮಂಡನೆಗೆ ಸಿದ್ಧತೆ ನಡೆದಿದೆ.

ಬುಧವಾರ (ಫೆ.22) ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಆಯವ್ಯಯದ ಪಟ್ಟಿ ಸಲ್ಲಿಕೆಯಾಗಲಿದೆ. ಬಜೆಟ್ ಮಂಡನೆಗೆ ಅನುಮತಿ ಕೋರಿ ಸಿಎಂಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಧಿಕೃತ ದಿನಾಂಕ ಪ್ರಕಟವಾಗಲಿದೆ. ಬೆಂಗಳೂರು ಅಭಿವೃದ್ಧಿಗಾಗಿ 9,698 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ, ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಇದರಲ್ಲಿ 6 ಸಾವಿರ ಕೋಟಿ ರೂ.ಗೂ ಅಧಿಕ ಪಾಲಿಕೆ ಪಾಲಾಗಿದೆ.

ಬಿಬಿಎಂಪಿಗೆ ಬರುತ್ತಿರುವ ಒಟ್ಟು ಆದಾಯ ಆಧಾರದ ಮೇರೆಗೆ ಬಜೆಟ್ ಗಾತ್ರವನ್ನು ನಿರ್ಧರಿಸಲಾಗುತ್ತದೆ. ಈ ಬಾರಿ ಬಜೆಟ್‌ನಲ್ಲಿ ಹೆಚ್ಚಾಗಿ ಹೊಸ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ. ಪಾಲಿಕೆ ವ್ಯಾಪ್ತಿಯಲ್ಲಿ 11 ನೂತನ ಮೇಲ್ಸೇತುವೆ, ‘ಬಿ’ಖಾತೆಯ ಆಸ್ತಿಗಳಿಗೆ ‘ಎ’ ಖಾತೆ ಹಂಚಿಕೆ ಕ್ರಮ, ಬಾಕಿ ಉಳಿದಿರುವ ಕಾಮಗಾರಿಗಳಿಗೆ ಪೂರ್ಣಗೊಳಿಸುವಿಕೆ, ಕಸ ವಿಲೇವಾರಿ, ರಸ್ತೆ, ಬೃಹತ್ ನೀರುಗಾಲುವೆ ಅಭಿವೃದ್ಧಿ, ಗ್ರೇಡ್ ಸೆಪರೇಟರ್ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ, 110 ಹಳ್ಳಿಗಳ ಅಭಿವೃದ್ಧಿ ಸೇರಿ ಸರ್ಕಾರದ ಅನುದಾನದಡಿ ಯೋಜನೆ ರೂಪಿಸಲಾಗಿದೆ.

ರಸ್ತೆ ಮತ್ತು ಬೀದಿ ದೀಪಗಳ ನಿರ್ವಹಣೆ, ಕೆರೆಗಳ ಅಭಿವೃದ್ಧಿ, ನೀರು ಸರಬರಾಜು ಸುಧಾರಣೆ ಮತ್ತು ಸಿಬ್ಬಂದಿ ವೇತನ ಸೇರಿ ಇತರ ಖರ್ಚು-ವೆಚ್ಚಗಳ ಭರಿಸಲು ಬಜೆಟ್ ಮಂಡನೆಯಾಗಲಿದೆ. ಪಾಲಿಕೆ ವ್ಯಾಪ್ತಿಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ, ರೂಪಿಸಲು ಆಯಾ ವಿಧಾನಸಭಾ ಕ್ಷೇತ್ರಗಳ ಅಥವಾ ಪಾಲಿಕೆಯ ಜನಪ್ರತಿನಿಧಿಗಳಿಂದ, ಸಾರ್ವಜನಿಕರು, ಸಂಘ ಸಂಸ್ಥೆಗಳು ಮತ್ತು ಇತರರಿಂದ ಕೋರಿಕೆಗಳ ಆದ್ಯತೆ ಮೇಲೆ ಅನುದಾನ ಒದಗಿಸಲಾಗುತ್ತದೆ ಎನ್ನಲಾಗಿದೆ. ಆರ್ಥಿಕ ಸಾಲಿನಲ್ಲಿ ಲಭ್ಯವಾಗುವ ಆರ್ಥಿಕ ಸಂಪನ್ಮೂಲದ ಮಿತಿಯೊಳಗೆ ಕಾರ್ಯಕ್ರಮ ತಯಾರಿಸಲಾಗಿದೆ.