ಜಿಲ್ಲೆ

ಪಡುಬಿದ್ರಿ ಜಂಕ್ಷನ್‌ನಲ್ಲಿ ತಡೆಬೇಲಿ ಸಮಸ್ಯೆ

ಇಂದಿರಾ ಎನ್ ಕೆ

ಪಡುಬಿದ್ರಿ: ರಾ.ಹೆ.66ರ ಪಡುಬಿದ್ರಿ ಜಂಕ್ಷನ್‌ನಲ್ಲಿ ನಿತ್ಯ ಸಂಭವಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಹೆದ್ದಾರಿ ವಿಭಜಕಕ್ಕೆ ಅಳವಡಿಸಿರುವ ತಡೆಬೇಲಿಯಿಂದ ಜನ ರಸ್ತೆ ದಾಟಲು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ಪಾದಚಾರಿಗಳು ರಸ್ತೆ ದಾಟುತ್ತಿರುವುದರಿಂದ ಅಪಘಾತಗಳಾಗಿ ತೊಂದರೆಗಳಾಗುತ್ತಿರುವುದನ್ನು ಮನಗಂಡು, ಪೊಲೀಸ್ ಇಲಾಖೆಯ ವಿಶೇಷ ಮುತುವರ್ಜಿಯಲ್ಲಿ ಗುತ್ತಿಗೆ ವಹಿಸಿರುವ ನವಯುಗ ಕಂಪನಿಯಿಂದ ತಡೆಬೇಲಿ ಅಳವಡಿಸುವ ಕಾರ್ಯ ನಡೆಸಲಾಗಿತ್ತು. ಆದರೆ ಹೆದ್ದಾರಿಯುದ್ದಕ್ಕೂ ಬೇಲಿ ಹಾಕಿದ್ದರಿಂದ ಒಂದು ಭಾಗದಿಂದ ಬಸ್ ಇಳಿದು ಇನ್ನೊಂದು ಪಾರ್ಶ್ವಕ್ಕೆ ತೆರಳಲು ಜನರು ಅರ್ಧ ಕಿ.ಮೀ. ಸುತ್ತಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯರ ದೂರಿನಂತೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜನ ರಸ್ತೆ ದಾಟಲು ನಿರ್ದಿಷ್ಟ ಸ್ಥಳದಲ್ಲಿ ತಡೆಬೇಲಿ ತೆರವು ಮಾಡಿ ಅನುಕೂಲ ಕಲ್ಪಿಸುವಂತೆ ಪಡುಬಿದ್ರಿ ಠಾಣಾಧಿಕಾರಿ ಸಕ್ತಿವೇಲು ಅವರಿಗೆ ಸೂಚಿಸಿದರು.

ತೆರವಿಗೆ ನೋಟಿಸ್

ಪಡುಬಿದ್ರಿ ಜಂಕ್ಷನ್‌ನಲ್ಲಿ ಪಾದಚಾರಿ ಮಾರ್ಗವೆನ್ನೆಲ್ಲ ವ್ಯಾಪಾರ ಮಳಿಗೆಗಳವರು ಅತಿಕ್ರಮಣ ಮಾಡಿದ್ದು, ಇದೀಗ ಸರ್ವೀಸ್ ರಸ್ತೆಯಲ್ಲಿ ಬಸ್ ಸಹಿತ ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡುವ ಕ್ರಮದಿಂದ ಪಾದಚಾರಿಗಳು ಜೀವ ಕೈಯಲ್ಲಿಡಿದು ರಸ್ತೆಯಲ್ಲಿಯೇ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಪಾದಚಾರಿ ಮಾರ್ಗದಲ್ಲಿನ ಅತಿಕ್ರಮಣ ತೆರವಿಗೆ ಹಲವು ವರ್ಷಗಳಿಂದ ಜಿಲ್ಲಾಡಳಿತ ಸಹಿತ ಸ್ಥಳೀಯಾಡಳಿತಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು. ಅಂಗಡಿ ಮಾಲೀಕರಿಗೆ ತಕ್ಷಣ ನೋಟಿಸ್ ನೀಡಿ ಅತಿಕ್ರಮಣ ತೆರವಿಗೆ ಕ್ರಮವಹಿಸಲಾಗುವುದು. ಪೊಲೀಸ್ ಇಲಾಖೆಯಿಂದ ಅದಕ್ಕೆ ಬೇಕಾದ ಭದ್ರತೆ ಒದಗಿಸಲಾಗುವುದು ಎಂದು ಪಿಡಿಒ ಮಂಜುನಾಥ ಶೆಟ್ಟಿ ಹಾಗೂ ಸಕ್ತಿವೇಲು ತಿಳಿಸಿದರು. ಪ್ರಮುಖರಾದ ನವೀನಚಂದ್ರ ಜೆ.ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಶಿಕಾಂತ ಪಡುಬಿದ್ರಿ, ಸಂದೇಶ್ ಶೆಟ್ಟಿ ಇದ್ದರು.