ಸಂದೀಪ್ ಸಾಲ್ಯಾನ್ ಬಂಟ್ವಾಳ
ಪಾಣೆಮಂಗಳೂರಿನಲ್ಲಿರುವ ಬ್ರಿಟಿಷರ ಕಾಲದ ಹಳೇ ಉಕ್ಕಿನ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಕ್ಕಾಗಿ ಅಳವಡಿಸಲಾದ ತಡೆಬೇಲಿ ಹಿಗ್ಗಿಕೊಂಡಿದ್ದು, ಕಳಪೆ ತಡೆಬೇಲಿ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ನಿಯಮ ಮೀರಿ ಸಂಚಾರ ನಡೆಸಿದ ಸಂದರ್ಭ ಸಿಲುಕಿಕೊಂಡಿದ್ದ ಭಾರಿ ವಾಹನಗಳನ್ನು ಹೊರತೆಗೆಯಲು ತಡೆಬೇಲಿ ಹಿಗ್ಗಿಸಲಾಗಿದ್ದು, ಸ್ವಾಗತ ಗೋಪುರದಂತೆ ಮಾರ್ಪಾಡಾಗಿದೆ.
ಕೆಲವು ದಿನಗಳ ಹಿಂದೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಚ್ಚೆತ್ತುಕೊಂಡ ಬಂಟ್ವಾಳ ಪುರಸಭೆ ಇಲ್ಲಿ ತಡೆಬೇಲಿ ಅಳವಡಿಸಿ ಭಾರಿ ವಾಹನಗಳ ಸಂಚಾರ ನಿಷೇಧಿಸಿತ್ತು. ಒಂದೇ ವಾರದಲ್ಲಿ ತಡೆಬೇಲಿ ಕಿತ್ತುಹೋಗಿದ್ದು, ಎರಡನೇ ಬಾರಿ 6.5 ಅಡಿ ಎತ್ತರದ ತಡೆಬೇಲಿ ಅಳವಡಿಸಲಾಗಿತ್ತು. ಈ ತಡೆಬೇಲಿ ಒಳಗೂ ಭಾರಿ ವಾಹನಗಳನ್ನು ನುಗ್ಗಿಸುವ ಪ್ರಯತ್ನ ಹಲವು ಬಾರಿ ನಡೆದಿದೆ. ಡಿ.21ರಂದು ಗೂಡ್ಸ್ ಟೆಂಪೊವೊಂದು ಈ ತಡೆಬೇಲಿ ಪ್ರವೇಶಿಸಿ ಹೊರಬರಲಾಗದೆ ಬಳಿಕ ಕ್ರೇನ್ ಬಳಸಿ ಹೊರ ತೆಗೆಯಲಾಗಿತ್ತು.
ವಾಲಿದ ಆಧಾರ ಸ್ತಂಭ
ಕಮಾನಿನಂತಾಗಿರುವ ತಡೆಬೇಲಿಯ ಆಧಾರಸ್ತಂಭವೂ ವಾಲಿಕೊಂಡಿದ್ದು, ಸಂಚರಿಸುವ ವಾಹನಗಳ ಮೇಲೆ ಯಾವಾಗ ಬೇಕಾದರೂ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಪುರಸಭೆಯ ಅಧಿಕಾರಿಗಳು ಇತ್ತ ಗಮನಹರಿಸಿ ಅಪಾಯಕಾರಿಯಾಗಿರುವ ತಡೆಬೇಲಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅಗತ್ಯ.
ಕಾನೂನು ಕ್ರಮಕ್ಕೆ ಒತ್ತಾಯ
ನಿಯಮ ಮೀರಿ ಸಂಚರಿಸಿ ತಡೆಬೇಲಿ ಹಾನಿಗೊಳಿಸಿದ ವಾಹನಗಳ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸೇತುವೆ ರಕ್ಷಣೆ ಹಿತದೃಷ್ಟಿಯಿಂದ ಸಂಬಂಧಿತ ಅಧಿಕಾರಿಗಳು ವಾಲಿದ ಕಂಬದ ಕುರಿತು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಸೂಚನೆ ನಿರ್ಲ ಕ್ಷ್ಯ
ಶತಮಾನ ಕಂಡಿರುವ ಪಾಣೆಮಂಗಳೂರಿನ ಉಕ್ಕಿನ ಸೇತುವೆ ಸ್ಮಾರಕವಾಗಿಸಬೇಕೆಂಬ ಆಗ್ರಹ ಹಲವು ವರ್ಷಗಳಿಂದ ಇದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಈ ಹಳೇ ಸೇತುವೆಯಲ್ಲಿ ಘನವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಜಿಲ್ಲಾಧಿಕಾರಿ ಆದೇಶದ ಸೂಚನಾ ಫಲಕವನ್ನು ಸೇತುವೆ ಇಕ್ಕಲಗಳಲ್ಲಿ ಅಳವಡಿಸಿದ್ದರೂ ಮರಳು ಲಾರಿ ಸಹಿತ ಪಾಣೆಮಂಗಳೂರಿಗೆ ಸರಕು ಹೊತ್ತು ತರುವ ಭಾರಿ ವಾಹನಗಳು ಸಂಚರಿಸುತ್ತಿವೆ.