ಬೆಂಗಳೂರು/ನವದೆಹಲಿ : ಪ್ರಧಾನಿ ಮೋದಿ ಆಕಾಶವಾಣಿಯಲ್ಲಿ ನಡೆಸುವ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಇಂದು ಬೆಂಗಳೂರು ರೈಲ್ವೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರೀಶಾ ಗಜನಿ ಅವರೊಂದಿಗೆ ಸಂಭಾಷಣೆ ನಡೆಸಿದರು. ಆಕ್ಸಿಜನ್ ಎಕ್ಸ್ಪ್ರೆಸ್ನ ಲೋಕೋ ಪೈಲೆಟ್ ಆಗಿ ಕರೊನಾ ರೋಗಿಗಳ ಚಿಕಿತ್ಸೆಗೆ ಅತ್ಯವಶ್ಯಕವಾದ ಮೆಡಿಕಲ್ ಆಕ್ಸಿಜನ್ಅನ್ನು ವಿವಿಧ ಪ್ರದೇಶಗಳಿಗೆ ತ್ವರಿತವಾಗಿ ಪೂರೈಸುವ ಕೆಲಸದಲ್ಲಿ ತೊಡಗಿರುವ ಶಿರೀಶಾ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಮನ್ ಕಿ ಬಾತ್ನ 77ನೇ ಸಂಚಿಕೆಯಲ್ಲಿ ಕರೊನಾ ವಿರುದ್ಧದ ಹೋರಾಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಹಲವು ಮುಂಚೂಣಿ ಕಾರ್ಯಕರ್ತರೊಂದಿಗೆ ಮೋದಿ ವಾರ್ತಾಲಾಪ ನಡೆಸಿದರು. ದೇಶದ ಸಂಕಷ್ಟ ಪರಿಸ್ಥಿತಿಯಲ್ಲಿ ಕರೊನಾ ವಾರಿಯರ್ಗಳ ಮಹತ್ವಪೂರ್ಣ ಸೇವೆ ಎಲ್ಲರೂ ಹೆಮ್ಮೆ ಪಡುವಂಥದ್ದು ಎಂದರು.
"ಮಹಿಳಾ ಸಿಬ್ಬಂದಿಗಳನ್ನೇ ಹೊಂದಿರುವ ಆಕ್ಸಿಜನ್ ಎಕ್ಸ್ಪ್ರೆಸ್ಗೆ ನೀವು ಪೈಲೆಟ್ ಆಗಿದ್ದೀರಿ. ನಾರಿಶಕ್ತಿಯ ಪ್ರತೀಕವಾಗಿ ಇಡೀ ದೇಶಕ್ಕೆ ನೀವು ಮಾದರಿಯಾಗಿದ್ದೀರಿ" ಎಂದು ಶಿರೀಷಾ ಅವರನ್ನು ಪ್ರಶಂಸಿಸಿದ ಪ್ರಧಾನಿ ಮೋದಿ, "ನಿಮ್ಮ ಸೇವೆಗೆ ಸ್ಫೂರ್ತಿ ಏನು?" ಎಂದು ಕೇಳಿದರು. ಆಕೆ ತಮ್ಮ ತಂದೆತಾಯಿಗಳೇ ತಮಗೆ ಸ್ಫೂರ್ತಿ. ತಮ್ಮ ಅಪ್ಪ, ಅಕ್ಕ ಕೂಡ ಸರ್ಕಾರಿ ನೌಕರರಾಗಿರುವುದು, ತಮಗೆ ಈ ಕ್ಷೇತ್ರ ಪ್ರವೇಶಿಸುವಂತೆ ಪ್ರೇರಣೆ ನೀಡಿತು ಎಂದರು.
"ಆಕ್ಸಿಜನ್ ಟ್ಯಾಂಕರ್ಗಳನ್ನು ಸುರಕ್ಷಿತವಾಗಿ ಸಾಗಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ನನಗೆ ಸಂತೋಷ ನೀಡಿದೆ. ರೈಲ್ವೆ ಇಲಾಖೆಯು ಆಕ್ಸಿಜನ್ ಎಕ್ಸ್ಪ್ರೆಸ್ಗೆ ಗ್ರೀನ್ ಪಾಥ್ ಒದಗಿಸಿದ್ದು, ಒಂದೂವರೆ ಗಂಟೆಯಲ್ಲಿ 125 ಕಿಲೋಮೀಟರ್ಗಳಷ್ಟು ದೂರ ಕ್ರಮಿಸಲು ಸಾಧ್ಯವಾಗುತ್ತಿದೆ" ಎಂದು ಶಿರೀಶಾ ಹೇಳಿದರು.
"ನಮ್ಮ ಬೆಂಗಳೂರು ವಿಭಾಗದಲ್ಲಿ ಆಕ್ಸಿಜನ್ ಎಕ್ಸ್ಪ್ರೆಸ್ ರೈಲನ್ನು ಆರಂಭದಿಂದ ನಡೆಸುತ್ತಿರುವ ಶಿರೀಷಾ ಗಜನಿ ಅವರ ಕೊಡುಗೆಯನ್ನು ಪ್ರಧಾನಿಗಳು ಶ್ಲಾಘಿಸಿದ್ದಾರೆ. ಇದು ನಮ್ಮ ತಂಡಕ್ಕೆ ಹೆಮ್ಮೆಯ ಕ್ಷಣ" ಎಂದು ಬೆಂಗಳೂರು ವಿಭಾಗ ರೈಲ್ವೆ ಮ್ಯಾನೇಜರ್ ಟ್ವೀಟ್ ಮಾಡಿದ್ದಾರೆ.