ಸಾಂದರ್ಭಿಕ ಚಿತ್ರ 
ಬಳ್ಳಾರಿ

ಲಕ್ಷ್ಮೀ ಪೂಜೆ ಮಾಡಿದ್ರೆ ಲಕ್ಷ ಲಕ್ಷ ಹಣ ಸಿಗುತ್ತೆ ಎಂದು ನಂಬಿಸಿ ಯುವತಿಯರ ಮಾರಾಟ: ಭಯಾನಕ ಜಾಲ ಭೇದಿಸಿದ ಬಳ್ಳಾರಿ ಪೊಲೀಸರು! Ballari Police

ಬಳ್ಳಾರಿ: ಮೂಢನಂಬಿಕೆ ಮತ್ತು ಹಣದ ಆಸೆಯನ್ನೇ ಬಂಡವಾಳ ಮಾಡಿಕೊಂಡು ಬಡ ಕುಟುಂಬದ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರನ್ನು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ವೇಶ್ಯಾವಾಟಿಕೆ ಜಾಲವೊಂದನ್ನು ಬಳ್ಳಾರಿ ಪೊಲೀಸರು ( Ballari Police ) ಭೇದಿಸಿದ್ದಾರೆ.

ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಅವರು ಸುದ್ದಿಗೋಷ್ಠಿಯಲ್ಲಿ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ವಿಶೇಷವಾಗಿ ಅವಿವಾಹಿತ, ಸುಂದರ ಯುವತಿಯರನ್ನು ಗುರಿಯಾಗಿಸಿಕೊಂಡಿದ್ದ ಈ ಗ್ಯಾಂಗ್, ಕಡ್ಡಾಯವಾಗಿ ಐದು ಅಡಿ ಆರು ಇಂಚು ಎತ್ತರವಿರುವ ಕನ್ಯೆಯರ ಫೋಟೋಗಳನ್ನು ಕೇಳುತ್ತಿತ್ತು. ಅಷ್ಟೇ ಅಲ್ಲದೆ, ಯುವತಿಯರ ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ತರಿಸಿಕೊಂಡು, ಈ ವಿಶೇಷ ಲಕ್ಷಣವಿರುವ ಯುವತಿಯರು ಲಕ್ಷ್ಮೀ ಪೂಜೆ ಮಾಡಿದರೆ 'ಹಣದ ಮಳೆ' ಸುರಿಯುತ್ತದೆ ಎಂದು ಸುಳ್ಳು ಕತೆ ಕಟ್ಟಿ ಬಡ ಹೆಣ್ಣುಮಕ್ಕಳ ಮನವೊಲಿಸುತ್ತಿತ್ತು ಎಂದು ತಿಳಿಸಿದ್ದಾರೆ.

ಪೂಜೆಯಿಂದ ಬರುವ ಹಣದಲ್ಲಿ ಯುವತಿಗೆ ಒಂದು ಪಾಲು, ಪೂಜೆ ಮಾಡುವ ಸ್ವಾಮೀಜಿಗೆ ಒಂದು ಪಾಲು ಮತ್ತು ಯುವತಿಯನ್ನು ಕರೆತಂದ ಏಜೆಂಟ್‌ಗೆ ಒಂದು ಪಾಲು ಸಿಗುತ್ತದೆ ಎಂದು ನಂಬಿಸಿ ಈ ಜಾಲವು ಯುವತಿಯರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿತ್ತು. ಆರಂಭದಲ್ಲಿ ಯುವತಿಯರ ಫೋಟೋ ಮತ್ತು ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ, ನಂತರ ಪೂಜೆಗೆ ಆಯ್ಕೆಯಾಗಿದ್ದೀರಿ ಎಂದು ನಂಬಿಸಿ ಕರೆಸಿಕೊಳ್ಳುತ್ತಿದ್ದ ಆರೋಪಿಗಳು, ಬಳಿಕ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ಮಾರಾಟ ಮಾಡುತ್ತಿದ್ದರು ಎಂದು ಪನ್ನೇಕರ್ ಅವರು ಮಾಹಿತಿ ನೀಡಿದರು.

ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ವೇಶ್ಯಾವಾಟಿಕೆ ಜಾಲ ಎಂಬುದು ತನಿಖೆಯಿಂದ ಸಾಬೀತಾಗಿದೆ. ಈ ದಂಧೆಯನ್ನು ಬಯಲಿಗೆಳೆಯಲು ಬಳ್ಳಾರಿಯ 'ಅಕ್ಕ ಪಡೆ'ಯ (Akka Squad) ಮಹಿಳಾ ಪೊಲೀಸರೇ ಬಡ ಮಹಿಳೆಯರ ವೇಷದಲ್ಲಿ ಗ್ಯಾಂಗ್ ಸೇರಿಕೊಂಡು ಬರೋಬ್ಬರಿ ಎರಡು ತಿಂಗಳ ಕಾಲ ರಹಸ್ಯ ಕಾರ್ಯಾಚರಣೆ ನಡೆಸಿದರು ಎಂದು ಪನ್ನೇಕರ್ ಅವರು ತಿಳಿಸಿದ್ದಾರೆ.

ಪೊಲೀಸರ ಈ ಚಾಣಾಕ್ಷ ಕಾರ್ಯಾಚರಣೆಯ ಫಲವಾಗಿ ಇದೀಗ ನಾಲ್ವರು ಅಮಾಯಕ ಯುವತಿಯರನ್ನು ರಕ್ಷಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ. ಈ ಜಾಲವು ಕೇವಲ ಬಳ್ಳಾರಿಗೆ ಮಾತ್ರ ಸೀಮಿತವಾಗಿರದೆ ಚಿಕ್ಕಮಗಳೂರು, ಮೈಸೂರು ಹಾಗೂ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲೂ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಪೊಲೀಸರ ಕಣ್ಣು ತಪ್ಪಿಸಲು ಈ ಗ್ಯಾಂಗ್ 'ಮೀಡಿಯಾ', 'ಪೇಪರ್' ಸೇರಿದಂತೆ ವಿವಿಧ ರಹಸ್ಯ ಕೋಡ್ ವರ್ಡ್‌ಗಳ ಮೂಲಕ ತಮ್ಮ ವ್ಯವಹಾರ ನಡೆಸುತ್ತಿತ್ತು ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸದ್ಯ ಈ ಕುರಿತು ಬಳ್ಳಾರಿಯ ಎಪಿಎಂಸಿ (APMC) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಇಡೀ ದಂಧೆಯ ಹಿಂದಿರುವ 'ಡಿಆರ್' (DR) ಎಂಬ ಪ್ರಮುಖ ಕಿಂಗ್‌ಪಿನ್‌ಗಾಗಿ ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಆತನನ್ನೂ ಬಂಧಿಸುವುದಾಗಿ ಎಸ್ಪಿ ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ. ಹಣದ ಮಳೆಯ ಆಸೆಗೆ ಬಿದ್ದು ಅಮಾಯಕ ಹೆಣ್ಣುಮಕ್ಕಳು ಇಂತಹ ಮೋಸದ ಜಾಲಗಳಿಗೆ ಬಲಿಯಾಗಬಾರದು ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.