ಜಿಲ್ಲೆ

VIDEO: ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್​ ವಿಧಿವಶ: ಯೂಟ್ಯೂಬ್​ ಚಾನೆಲ್​​ನಲ್ಲಿ ಅಪ್ಲೋಡ್ ಆಗಿದೆ ಲಾಸ್ಟ್​ ವಿಡಿಯೋ...

Mysuru Rural

ಬೆಂಗಳೂರು: ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಬೆಂಗಳೂರಿನ ಎಮ್.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟರು ಎಂದು ಅವರ ಆಪ್ತವಲಯಗಳು ತಿಳಿಸಿವೆ.

ಬಜರಂಗದಳದ ಶಾಖೆಯ ಕರ್ನಾಟಕದ ಕನ್ವೀನರ್ ಆಗಿದ್ದ ಮಹೇಂದ್ರ ಕುಮಾರ್, ಸಂಘ ಪರಿವಾರದ ಪ್ರಭಾವೀ ವಲಯದಲ್ಲಿ ಗುರುತಿಸಿಕೊಂಡಿದ್ದರು. ಹಲವು ಹಿಂದುಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು ಕೂಡ. ಅವರು ಉತ್ತಮ ಸಂಘಟಕರಾಗಿ ಸಂಘಪರಿವಾರದಲ್ಲಿ ಹೆಸರುಗಳಿಸಿದ್ದರು.

ಆದರೆ, 2008ರಲ್ಲಿ ದಕ್ಷಿಣ ಕನ್ನಡದಲ್ಲಿನ ಚರ್ಚ್​ ದಾಳಿ ಘಟನೆ ಬಳಿಕ 42 ದಿನ ಮಂಗಳೂರಿನ ಜೈಲಿನಲ್ಲಿದ್ದರು. ಅಲ್ಲದೆ, ತೀವ್ರ ಟೀಕೆಗೂ ಗುರಿಯಾಗಿದ್ದರು. ಈ ಘಟನೆ ಬಳಿಕ ಅವರು ಹಿಂದುಪರ ಸಂಘಟನೆಗಳಿಂದ ದೂರವಾಗಿದ್ದರು. 2018ರಲ್ಲಿ ನಮ್ಮ ಧ್ವನಿ ದೇಶ ರಕ್ಷಣೆಗಾಗಿ ಎಂಬ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದ ಅವರು, ರಾಷ್ಟ್ರಹಿತಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದರು. ಅವರ ಈ ಚಾನೆಲ್​ಗೆ 59 ಸಾವಿರ ಜನರ ಚಂದಾದಾರರು ಇದ್ದರು. ನಿನ್ನೆಯೂ ಅವರು "ಪೊಲೀಸ್ ಇಲಾಖೆಯ ಜವಾಬ್ದಾರಿಯುತ ಕಾರ್ಯಗಳು ಇತಿಹಾಸದ ಪುಟ ಸೇರಬೇಕು'' ಎಂಬ ಎಪಿಸೋಡನ್ನು ಅಪ್ಲೋಡ್​ ಮಾಡಿದ್ದರು. ಬಹುಶಃ ಇದು ಅವರ ಕೊನೆಯ ವಿಡಿಯೋ ಇರಬೇಕು.