ಬೆಂಗಳೂರು: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ (ಜಾತಿ ಗಣತಿ) ವರದಿಯನ್ನು ರಾಜಕೀಯ ದಾಳವಾಗಿ ಬಳಕೆಗೆ ಸಿಎಂ ಸಿದ್ದರಾಮಯ್ಯ ( CM Siddaramaiah ) ಆತುರ ತೋರುತ್ತಿರುವಂತಿದೆ. ಈ ಸಂಶಯ ನಮ್ಮ ಪಕ್ಷಕ್ಕಿಂತಲೂ ಹೆಚ್ಚಾಗಿ ಆಡಳಿತ ಕಾಂಗ್ರೆಸ್ ಪಕ್ಷದ ನಾಯಕರೇ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ( B Y Vijayendra ) ಹೇಳಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣಗಳು ಸಿಎಂ ಕುರ್ಚಿಯನ್ನು ಅಲುಗಾಡಿಸಲು ಶುರು ಮಾಡಿದ್ದು, ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಗೊತ್ತಾಗಿದೆ. ರಾಜಕೀಯ ಷಡ್ಯಂತ್ರದ ಭಾಗವಾಗಿ ತರಾತುರಿಯಿಂದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆಗೆ ಮುಂದಾಗಿದ್ದಾರೆ ಎಂದು ವಿಶ್ಲೇಷಿಸಿದ ಅವರು, ಕಾಂಗ್ರೆಸ್ ಪಕ್ಷದ ಅನೇಕ ನಾಯಕರ ಹೇಳಿಕೆಗಳೇ ನಿದರ್ಶನವೆಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿದ ನಂತರ ಜಾತಿ ಗಣತಿ ವಿಚಾರದಲ್ಲಿ ಪಕ್ಷ ಒಂದು ನಿರ್ಧಾರಕ್ಕೆ ಬರಲಿದೆ ಎಂದಿದ್ದರೆ, ಶಾಮನೂರು ಶಿವಶಂಕರಪ್ಪ ಈ ವರದಿಯೇ ಅವೈಜ್ಞಾನಿಕ ಎನ್ನುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಅಪಸ್ವರ ಎತ್ತಿದ್ದಾರೆ.
ಸ್ವಪಕ್ಷದವರೇ ವಿರೋಧ, ಆಕ್ಷೇಪ ವ್ಯಕ್ತಪಡಿಸುತ್ತಿರುವಾಗ ಸಿಎಂ ಸಿದ್ದರಾಮಯ್ಯ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಬಗ್ಗೆ ಅಷ್ಟೊಂದು ಪ್ರಾಮಾಣಿಕ ಕಾಳಜಿಯಿದ್ದರೆ ಮೊದಲ ಅಧಿಕಾರದ ಅವಧಿಯಲ್ಲಿ ವರದಿ ಅಂಗೀಕರಿಸಿ ಅನುಷ್ಠಾನಕ್ಕೆ ತರಲು ಅವಕಾಶವಿತ್ತಲ್ಲವೆ ? ಎಂದು ವಿಜಯೇಂದ್ರ ಕೇಳಿದರು.
ಅಂತ್ಯೋದಯ ಬಿಜೆಪಿಯ ಧ್ಯೇಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಅಭಿವೃದ್ಧಿ ಮುಖ್ಯವಾಹಿನಿಗೆ ಸೇರಬೇಕು ಎಂದು ಪಕ್ಷ ಬಯಸುತ್ತದೆ. ಶೋಷಿತರು, ಸವಲತ್ತು ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ, ವರದಿ ಅವೈಜ್ಞಾನಿಕವಾಗಿದೆ ಎಂದು ಕಾಂಗ್ರೆಸ್ ಪಕ್ಷದವರೇ ಹೇಳುತ್ತಿರುವಾಗ ನಾವು ನಂಬುವುದು ಹೇಗೆ ? ಇಷ್ಟಕ್ಕೂ ಜಾತಿ ಗಣತಿ ಅಧಿಕಾರ ಕೇಂದ್ರ ಸರ್ಕಾರಕ್ಕಿದೆಯೇ ಹೊರತು ರಾಜ್ಯ ಸರ್ಕಾರಕ್ಕೆ ಇಲ್ಲವೆಂದು ಬಿ.ವೈ.ವಿಜಯೇಂದ್ರ ಪ್ರತಿಪಾದಿಸಿದರು.