ಜಿಲ್ಲೆ

ಆಟೋ-ಟಿಪ್ಪರ್ ಭೀಕರ ಅಪಘಾತ; ಗ್ರಾಮ ಪಂಚಾಯತ್ ಅಧ್ಯಕ್ಷೆ ಸೇರಿ ಒಂದೇ ಕುಟುಂಬದ ಐವರ ದುರ್ಮರಣ

ಮಂಡ್ಯ: ಆಟೋರಿಕ್ಷಾ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದುರ್ಮರಣ ಕಂಡಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಗೇಟ್ ಬಳಿಯ ಮದ್ದೂರು-ಮಳವಳ್ಳಿ ಬಳಿ ಈ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೇರಿ ಒಂದೇ ಕುಟುಂಬ ಐವರು ದುರ್ಮರಣಕ್ಕೀಡಾಗಿದ್ದಾರೆ. ದಡದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುತ್ತಮ್ಮ (52), ವೆಂಕಟೇಶ್ (25), ಬಸಮ್ಮಣ್ಣಿ (30), ಚಾಮುಂಡೇಶ್ವರಿ (8) ಹಾಗೂ ಗಂಡು ಮಗು ಮೃತಪಟ್ಟವರು.

ಆಟೋದಲ್ಲಿ ಮಗ, ಮಗಳು ಹಾಗೂ ಮೊಮ್ಮಕ್ಕಳ ಜತೆ ದೇವಸ್ಥಾನಕ್ಕೆ ಹೋಗಿ ವಾಪಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಆಟೋ ಮದ್ದೂರು ಕಡೆಯಿಂದ ಹೋಗುತ್ತಿದ್ದು, ಟಿಪ್ಪರ್ ಮಳವಳ್ಳಿ ಕಡೆಯಿಂದ ಬರುತ್ತಿತ್ತು. ನೆಲಮಾಕನಹಳ್ಳಿ ಗೇಟ್ ಬಳಿ ಆಟೋ ಬರುತ್ತಿದ್ದಂತೆ ಎದುರಿಗೆ ಸಿಕ್ಕ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಮುತ್ತಮ್ಮ, ವೆಂಕಟೇಶ್ ಹಾಗೂ ಬಸಮ್ಮಣ್ಣಿ ಸ್ಥಳದಲ್ಲೇ ಮೃತಪಟ್ಟರೆ, ಮಳವಳ್ಳಿ ಆಸ್ಪತ್ರೆಯಲ್ಲಿ ಮಕ್ಕಳಿಬ್ಬರು ಕೊನೆಯುಸಿರೆಳೆದರು. ಮಳವಳ್ಳಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.