ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ದೇವರ ವಚನಗಳನ್ನು ಚಾಚೂ ತಪ್ಪದೆ ಪಾಲಿಸುವವರ ಜೀವನದಲ್ಲಿ ಕಪೋಲಕಲ್ಪಿತ ವಿಚಾರ ಇರುವುದಿಲ್ಲ. ಅಂತವರಲ್ಲಿ ಮೂಡುವ ಭಕ್ತಿಯೇ ಜೀವನದಲ್ಲಿರುವ ನಿಜವಾದ ಶ್ರೇಷ್ಠ ಭಕ್ತಿ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಭಗವಾನ್ ಶ್ರೀ ಮಹಾವೀರ ಸ್ವಾಮಿ 2624ನೇ ಜನ್ಮ ಕಲ್ಯಾಣ ಮಹೋತ್ಸವ, ಸಾವಿರ ಕಂಬದ ಬಸದಿ ಹಿರಿಯ-ಕಿರಿಯ ರಥೋತ್ಸವ ಹಾಗೂ ಆಚಾರ್ಯ 108 ವಿದ್ಯಾನಂದ ಮುನಿಮಹಾರಾಜರ ಜನ್ಮ ಶತಾಬ್ಧಿ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಾಮೂಹಿಕ ಅಷ್ಟವಿಧಾರ್ಚನೆ ಪೂಜೆಯಲ್ಲಿ ಆಶೀರ್ವಚನ ನೀಡಿದರು.
ಪವಿತ್ರ ಧವಳ ಗ್ರಂಥಗಳಿರುವ ಪುಣ್ಯ ಕ್ಷೇತ್ರ ಮೂಡುಬಿದಿರೆಯಲ್ಲಿ ಸಾಂಘಿಕವಾಗಿ ಪ್ರಾರ್ಥನೆ ಮಾಡುವುದರಿಂದ ಪಾವಿತ್ರೃ ಮತ್ತಷ್ಟು ಪ್ರಜ್ವಲಿಸುತ್ತದೆ. ಣಮೋಕಾರದೊಂದಿಗೆ ದೇವರ ಸ್ಮರಣೆ ಮಾಡುವುದರಿಂದ ಮನೋಶಕ್ತಿ ಪ್ರಬಲವಾಗುತ್ತದೆ ಎಂದರು.
125 ಮಂದಿ ಪೂಜಾರ್ಥಿಗಳಾಗಿದ್ದರು. ಮಿತ್ರಸೇನ ಇಂದ್ರ ಮತ್ತು ಸೂರಜ್ ಪೂಜಾ ವಿಧಿವಿಧಾನ ನೆರವೇರಿಸಿದರು. ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಎಂ.ಸುದೇಶ್ ಕುಮಾರ್, ಆದರ್ಶ್ ಮೂಡುಬಿದಿರೆ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ವಕೀಲ ಎಂ.ಬಾಹುಬಲಿ ಪ್ರಸಾದ್, ಉದ್ಯಮಿ ಶೈಲೇಂದ್ರ ಕುಮಾರ್, ಧನಕೀರ್ತಿ ಬಲಿಪ, ಜೈನ್ ಮಿಲನ್‌ನ ರಾಜೇಶ್, ಪುಷ್ಪರಾಜ್ ಜೈನ್, ಸರ್ವಮಂಗಳ ಮಹಿಳಾ ಮಂಡಲ ಅಧ್ಯಕ್ಷೆ ಮಂಗಳ, ಕಾರ್ಯದರ್ಶಿ ಆರತಿ, ವಕೀಲೆ ಶ್ವೇತಾ ಜೈನ್, ಅನಂತವೀರ್, ರಾಜವರ್ಮ ಬೈಲಂಗಡಿ ಮತ್ತಿತರರಿದ್ದರು.
ವೈಭವದ ಮೆರವಣಿಗೆ
ಮಹಾವೀರ ಜಯಂತಿ ಪ್ರಯುಕ್ತ ಗುರುವಾರ ಸಂಜೆ ಬೆಟ್ಕೇರಿಯಿಂದ ಸಾವಿರ ಕಂಬದ ಬಸದಿ ವರೆಗೆ ಮಹಾವೀರ ಸ್ವಾಮಿ ವೈಭವದ ಮೆರವಣಿಗೆ ನಡೆಯಿತು. ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಮಹಾವೀರ ಸ್ವಾಮಿ ಮೂರ್ತಿ ಮತ್ತು ಧವಳಗ್ರಂಥಗಳನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಯಿತು.