ವಿಜಯಪುರದ ನೂತನ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಎನ್.ಮಹೇಶ ಹಾಗೂ ವಿಪ ಸದಸ್ಯ ಸಿ.ಟಿ. ರವಿ ಸುದ್ದಿಗೋಷ್ಠಿ ನಡೆಸಿದರು. 
ಜಿಲ್ಲೆ

ಡಾ.ಅಂಬೇಡ್ಕರ್ ಕುರಿತ ಅಮಿತ್ ಷಾ ಹೇಳಿಕೆ, ಬಿಜೆಪಿ ನಾಯಕರ ಭಿನ್ನ ಹೇಳಿಕೆ, ಮೊದಲಾರ್ಧ ಹೇಳಿಕೆಗೆ ಸಮರ್ಥನೆ ಇಲ್ಲ ಎಂದ ಎನ್. ಮಹೇಶ -ಆಶಯ ಅರಿಯಿರಿ ಎಂದ ಸಿ.ಟಿ. ರವಿ

ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ್ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಮಾಜಿ ಸಚಿವ ಎನ್. ಮಹೇಶ ಅವರು ಭಿನ್ನ ಭಿನ್ನ ಹೇಳಿಕೆ ನೀಡುವ ಮೂಲಕ ಪಕ್ಷದ ನಿಲುವಿನ ಬಗ್ಗೆ ಗೊಂದಲ ಸೃಷ್ಠಿಸಿದರು.

ಇಲ್ಲಿನ ನೂತನ ಪ್ರವಾಸಿ ಮಂದರಿದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಉಭಯ ನಾಯಕರು, ಡಾ.ಅಂಬೇಡ್ಕರ್ ಕುರಿತು ಅಮಿತ್ ಷಾ ನೀಡಿದ ಮೊದಲಾರ್ಧ ಹೇಳಿಕೆಯನ್ನು ಪರಿಗಣಿಸಬೇಕು. ಭಾಷಣದ ಮುಂದುವರಿದ ಭಾಗವನ್ನು ಪರಿಗಣಿಸಿ ಅಂಬೇಡ್ಕರ್ ವಿಚಾರದಲ್ಲಿ ಬಿಜೆಪಿಯ ಆಶಯ ಹಾಗೂ ಕಾಂಗ್ರೆಸ್‌ನ ಧೋರಣೆ ಅರಿಯಬೇಕೆಂದರು.

ಎನ್. ಮಹೇಶ ಅವರು ಮಾತನಾಡುತ್ತಾ, ಅಮಿತ್ ಷಾ ಅವರ ಮೊದಲಾರ್ಧ ಹೇಳಿಕೆಗೆ ನನ್ನ ಸಮರ್ಥನೆ ಇಲ್ಲ. ನಾನೆಂದಿಗೂ ಅದನ್ನು ಸಮರ್ಥಿಸಿಕೊಳ್ಳಲ್ಲ ಎಂದರೆ ಸಿ.ಟಿ. ರವಿ ಅವರು, ಅಮಿತ್ ಷಾ ಅವರ ಸಂಪೂರ್ಣ ಭಾಷಣದ ಸಾರ ಅರಿಯಬೇಕೆಂಬುದೇ ನನ್ನ ಆಶಯ ಎಂದರು.

ಮುಂದುವರಿದು ಮಾತನಾಡಿದ ಸಿ.ಟಿ. ರವಿ ಅವರು, ಕಾಂಗ್ರೆಸ್ ಅಮಿತ್ ಷಾ ಹೇಳಿಕೆಯನ್ನು ತಿರುಚಿದೆ ಎಂದರು. ಅಲ್ಲದೇ, ಡಾ.ಅಂಬೇಡ್ಕರ್ ಅವರ ವಿಚಾರದಲ್ಲಿ ಕಾಂಗ್ರೆಸ್‌ನ ಸುಳ್ಳುಗಳನ್ನು ಬಿಚ್ಚಿಡಲೆಂದೇ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಬಿಜೆಪಿ ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಎಂಬ ಟೀಕೆ ಮಾಡುವ ಕಾಂಗ್ರೆಸ್ ಈ ಹಿಂದೆ ಅಂಬೇಡ್ಕರ್ ವಿರೋಧಿಯಾಗಿ ಹೇಗೆಲ್ಲ ಕೆಲಸ ಮಾಡಿದ ಎಂಬುದನ್ನೇ ತಿಳಿಸಿಕೊಡುವುದು ಅಭಿಯಾನದ ಉದ್ದೇಶ ಎಂದರು.