ಜಿಲ್ಲೆ

ಮನೆಯಿಂದ ದೂರದಲ್ಲಿ ಕಾರು ಪಾರ್ಕ್ ಮಾಡುತ್ತಿದ್ದೀರಾ? ಹಾಗಿದ್ರೆ ಹುಷಾರು!

ಮೈಸೂರು: ಮನೆಯಿಂದ ತುಂಬಾ ದೂರದಲ್ಲಿ ಕಾರು ಪಾರ್ಕ್ ಮಾಡುವವರಿಗೆ ಇದೊಂದು ಎಚ್ಚರಿಕೆ ಗಂಟೆ ಎಂದರೂ ತಪ್ಪಾಗಲಾರದು. ಅದರಲ್ಲೂ ಈಗಿನ ಕರೊನಾ-ಲಾಕ್​ಡೌನ್​ ಸಂಕಷ್ಟದ ಸಂದರ್ಭದಲ್ಲಿ ಯಾವುದಕ್ಕೂ ಎಂದಿಗಿಂತ ಹೆಚ್ಚಿನ ಮುಂಜಾಗ್ರತೆಯಲ್ಲಿ ಇರುವುದು ಒಳಿತು.

ಏಕೆಂದರೆ ಮೈಸೂರಿನಲ್ಲಿ ಹೀಗೆ ಮನೆಯಿಂದ ದೂರದಲ್ಲಿ ವ್ಯಕ್ತಿಯೊಬ್ಬರು ಕಾರು ಪಾರ್ಕ್ ಮಾಡಿ ಹೋಗಿದ್ದು, ಅದರ ನಾಲ್ಕೂ ಚಕ್ರಗಳು ಈಗ ಮಾಯವಾಗಿವೆ. ಯಾರೋ ಕಿಡಿಗೇಡಿಗಳು ಚಕ್ರಗಳನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೈಸೂರಿನ ವಿವೇಕಾನಂದ ವೃತ್ತದ ಬಳಿ ಲಿಂಗಾಂಬುಧಿ ಉದ್ಯಾನಕ್ಕೆ ಹೋಗುವ ಮಾರ್ಗದಲ್ಲಿ ಈ ಕಾರನ್ನು ಪಾರ್ಕ್ ಮಾಡಿ ಹೋದ ಬಳಿಕ ಇಂಥದ್ದೊಂದು ಘಟನೆ ನಡೆದಿದೆ.

ಈ ಪ್ರದೇಶದಲ್ಲಿ ದಾರಿಯುದ್ದಕ್ಕೂ ಬಸ್​-ಕಾರುಗಳು ಸೇರಿ ಹಲವಾರು ವಾಹನಗಳನ್ನು ಪಾರ್ಕ್ ಮಾಡಲಾಗಿರುತ್ತದೆ. ಕೆಲವರು ತಮ್ಮ ಮನೆ ದೂರದಲ್ಲಿದ್ದರೂ ಇಲ್ಲೇ ವಾಹನ ನಿಲುಗಡೆ ಮಾಡಿ ಹೋಗಿರುತ್ತಾರೆ. ದೂರದಲ್ಲೆಲ್ಲೋ ವಾಹನ ನಿಲ್ಲಿಸಿ ಹೋಗುವವರಿಗೆ ಇದೊಂದು ಎಚ್ಚರಿಕೆಯ ಸಂಗತಿ ಎಂಬುದಾಗಿ ಮೈಸೂರಿನ ಪಿ.ಜೆ. ರಾಘವೇಂದ್ರ ಎಂಬವರು ಸೋಷಿಯಲ್ ಮೀಡಿಯಾ ಮೂಲಕ ಈ ವಿಚಾರವಾಗಿ ಪೋಸ್ಟ್​ ಮಾಡಿ, ಅಪಾಯದ ಸೂಚನೆ ಇರುವುದರ ಕುರಿತು ಸಾರ್ವಜನಿಕರ ಗಮನ ಸೆಳೆದಿದ್ದಾರೆ.