ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ನನೆಗುದಿಗೆ ಬಿದ್ದಿದ್ದ ಅಜಿಲಮೊಗರು- ಕಡೇಶ್ವಾಲ್ಯ ಸೌಹಾರ್ದ ಸೇತುವೆ ಕಾಮಗಾರಿ ಬಹುದಿನಗಳ ಬಳಿಕ ಮರು ಆರಂಭಗೊಂಡಿದೆ.
ಏಳು ವರ್ಷಗಳ ಹಿಂದೆ ಆರಂಭಗೊಂಡಿದ್ದ ಈ ಸೇತುವೆ ನಿಧಾನಗತಿಯ ಕಾಮಗಾರಿಯಿಂದಾಗಿ ಇನ್ನೂ ಪೂರ್ಣಗೊಂಡಿರದ ಕಾರಣ ಮಾ.27ರಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೇತುವೆ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದ್ದರು. ಆದರೆ ಆಗ ಸ್ಥಗಿತಗೊಂಡಿದ್ದ ಕಾಮಗಾರಿ ದಿನ ಕಳೆದರೂ ಆರಂಭಗೊಂಡಿರಲಿಲ್ಲ. ಈ ನಡುವೆ ಅಜಿಲಮೊಗರು- ಕಡೇಶ್ವಾಲ್ಯ ಸೌಹಾರ್ದ ಸೇತುವೆ ಹೋರಾಟ ಸಮಿತಿ ಹಾಗೂ ಸರಪಾಡಿ ರೈತ ಸಂಘದವರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಬಂಟ್ವಾಳ ತಾಲೂಕಿನ ಎರಡು ಧಾರ್ಮಿಕ ಕ್ಷೇತ್ರಗಳಾದ ಅಜಿಲಮೊಗರು ಮಸೀದಿಯ ಮುಂಭಾಗದಿಂದ ಮತ್ತು ಕಡೇಶ್ವಾಲ್ಯ ಶ್ರೀ ಲಕ್ಷ್ಮೀನರಸಿಂಸ ದೇವಸ್ಥಾನ ಸಂಪರ್ಕಿಸುವ ನಿಟ್ಟಿನಲ್ಲಿ ಜೀವನದಿ ನೇತ್ರಾವತಿ ನದಿಗೆ ಸೇತುವೆ ಮತ್ತು ಸಂಪರ್ಕ ರಸ್ತೆಯ ಸೌಹಾರ್ದ ಸೇತುವೆ ಕಾಮಗಾರಿ ಪದೇಪದೆ ಸ್ಥಗಿತಗೊಳ್ಳುತ್ತಿದ್ದು, ಜನರ ಸೌಹಾರ್ದ ಸೇತುವೆಯ ಕನಸು ನನಸಾಗದೆ ಉಳಿದು ನಿರಾಸೆ ಮೂಡಿಸಿತ್ತು
ಅಡೆತಡೆ ನಿವಾರಣೆ
ಸೌಹಾರ್ದ ಸೇತುವೆ ಮತ್ತು ಸಂಪರ್ಕ ರಸ್ತೆ ಯೋಜನೆಗೆ ನೀಲಿನಕಾಶೆ ಸಿದ್ಧಗೊಂಡು 2017ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆಯಾಗಿದ್ದು, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‌ಡಿಸಿಎಲ್)ದಿಂದ 19.84 ಕೋಟಿ ರೂ. ಅನುದಾನ ಮಂಜೂರುಗೊಂಡಿತ್ತು. ಅಜಿಲಮೊಗರಿನಿಂದ ಕಡೇಶ್ವಾಲ್ಯಕ್ಕೆ ಒಟ್ಟು 312 ಮೀ. ಉದ್ದ ಮತ್ತು 10.50 ಮೀ. ಅಗಲದ ಸೇತುವೆ ಜತೆಗೆ ಒಟ್ಟು 378 ಮೀ. ಉದ್ದದ ಸಂಪರ್ಕ ರಸ್ತೆ ಕಾಮಗಾರಿಯನ್ನು ಚೆನ್ನೈನ ಎಸ್‌ಪಿಎಲ್ ಕಂಪನಿಗೆ ಗುತ್ತಿಗೆ ವಹಿಸಲಾಗಿತ್ತು. 2021ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಒಪ್ಪಂದ ಮಾಡಲಾಗಿತ್ತು. ಪ್ರಸ್ತುತ ಎರಡು ಫೌಂಡೇಶನ್ ಸಹಿತ ಪಿಲ್ಲರ್ ಬಾಕಿ ಉಳಿದಿದ್ದು, ಕಾಮಗಾರಿ ನಡೆಯುತ್ತಿದೆ. ಕುಂಟುತ್ತಾ ಸಾಗಿದ ಕಾಮಗಾರಿ ಹಲವಾರು ಅಡೆತಡೆಗಳನ್ನು ನಿವಾರಿಸಿ ಮುಂದುವರಿಯುತ್ತಾ ಬಂದಿದೆ.
ಮಳೆಗಾಲದ ಮುಂಚೆ ಪೂರ್ಣ
ಈ ಬಗ್ಗೆ ಅಜಿಲಮೊಗರು- ಕಡೇಶ್ವಾಲ್ಯ ಸೌಹಾರ್ದ ಸೇತುವೆ ಹೋರಾಟ ಸಮಿತಿ ಹಾಗೂ ಸರಪಾಡಿ ರೈತ ಸಂಘದವರು ಮತ್ತು ಸಾರ್ವಜನಿಕರು ವಿವಿಧ ಜನಪ್ರತಿನಿಧಿಗಳನ್ನು ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದರು. ಬಳಿಕ ದ.ಕ. ಜಿಲ್ಲಾಧಿಕಾರಿ ಭೇಟಿ ನೀಡಿದಾಗ ಸೇತುವೆ ಪಿಲ್ಲರ್ ನಿರ್ಮಾಣ ಕಾಮಗಾರಿಗೆ ನದಿ ನೀರು ಅಡ್ಡಿಯಾಗುತ್ತಿರುವುದಾಗಿಯೂ ಕೆಲವೊಂದು ಹೆಚ್ಚುವರಿ ಯಂತ್ರೋಪಕರಣಗಳ ಅಗತ್ಯ ಇರುವುದಾಗಿ ಗುತ್ತಿಗೆದಾರರರು ತಿಳಿಸಿದ್ದರು. ಹೆಚ್ಚುವರಿ ಮೊತ್ತ ಅನುದಾನ ಅವಶ್ಯವಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಡಿ.ಸಿ. ತಿಳಿಸಿದ್ದರು. ಇದೀಗ ಕೆಆರ್‌ಡಿಸಿಎಲ್‌ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಜತೆಗೆ ಬೇರೆ ಕಂಪನಿಯಿಂದ ಯಂತ್ರೋಪಕರಣಗಳನ್ನು ತರಿಸಿರುವುದಾಗಿ ಸಂಸ್ಥೆಯ ಅಭಿಯಂತ ತಿಳಿಸಿದ್ದಾರೆ. ಸ್ಥಳಕ್ಕೆ ಬೃಹತ್ ಕ್ರೇನ್‌ಗಳು ಆಗಮಿಸಿದ್ದು, ಸೇತುವೆ ಮೇಲಿನ ಬೀಮ್‌ಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಪ್ರಸ್ತುತ ನದಿಯಲ್ಲಿ ನೀರಿದ್ದರೂ ಆಧುನಿಕ ತಂತ್ರಜ್ಞಾನದಿಂದ ಪಿಲ್ಲರ್ ನಿರ್ಮಾಣದ ಕಾರ್ಯ ಆರಂಭಿಸಲಾಗುವುದು. ಮಳೆಗಾಲದ ಮುಂಚೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.