ಸುಳ್ಯ: ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಬಿಜೆಪಿ ಬೆಂಬಲಿತ ಚುನಾಯಿತ ಸಹಕಾರಿಗಳ ಸಮಾವೇಶ ಮೇ 17ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ 350 ನಿರ್ದೇಶಕರು ಜಯ ಗಳಿಸಿದ್ದಾರೆ. ಅವರೆಲ್ಲರೂ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಸಮಾವೇಶ ಉದ್ಘಾಟಿಸಲಿದ್ದಾರೆ. 9.30ರಿಂದ 11 ಗಂಟೆ ತನಕ ಎರಡು ವಿಚಾರಗೋಷ್ಠಿಗಳು ನಡೆಯಲಿವೆೆ. ಸಹಕಾರಿ ಕ್ಷೇತ್ರದ ಕೆಲಸದ ಮೂಲಕ ರೈತರಿಗೆ ಸಹಾಯ ಮಾಡುವುದು, ಸಾಮಾಜಿಕ ಕ್ಷೇತ್ರದ ಸೇವಾ ಕಾರ್ಯಗಳ ಕುರಿತು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಎಸ್.ಆರ್.ಸತೀಶ್ಚಂದ್ರ ವಿಚಾರ ಮಂಡಿಸಲಿದ್ದಾರೆ. 11 ಗಂಟೆಗೆ ಸಮಾರೋಪ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಸಿಎ ಬ್ಯಾಂಕ್ ಅಧ್ಯಕ್ಷ ಎ.ವಿ.ವಿಕ್ರಮ್ ಅಡ್ಪಂಗಾಯ, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾರಾಯಣ ಶಾಂತಿನಗರ, ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಉಪಸ್ಥಿತರಿದ್ದರು.
ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗಿ ಸರಕಾರ ನಡೆಸಬೇಕೆಂದು ಭಾರತೀಯ ಜನತಾ ಪಾರ್ಟಿ ಜಯನಗರ ಬೂತ್ ಸಮಿತಿಯವರು ಸುಳ್ಯ ಜಯನಗರ ಕೊರಂಬಡ್ಕದ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಸಾನಿಧ್ಯದಲ್ಲಿ ಸಂಕಲ್ಪ ಮಾಡಿಕೊಂಡ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ ಕಾರ್ಯಕ್ರಮದಲ್ಲಿ ಬಿ.ವೈ. ವಿಜಯೇಂದ್ರ ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ. ವೆಂಕಟ್ ವಳಲಂಬೆ ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ