ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವನನ್ನು ಸಿಸಿಬಿ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ. ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರನಾಗಿರುವ ಆದಿತ್ಯ ಕಳೆದ ನಾಲ್ಕು ತಿಂಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ.
ಡ್ರಗ್ ಮಾಫಿಯಾ ಪ್ರಕರಣದಲ್ಲಿ ಆದಿತ್ಯ ಆಳ್ವ 6ನೇ ಆರೋಪಿಯಾಗಿದ್ದ. ಎಫ್ಐಆರ್ ದಾಖಲಾದ ಬೆನ್ನಲ್ಲೇ ತಲೆಮರಿಸಿಕೊಂಡಿದ್ದ ಆದಿತ್ಯ ಆಳ್ವಗೆ ಸಿಸಿಬಿ ಪೊಲೀಸರು ಸೆ. 21ರಂದು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ, ಜಾಮೀನು ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತನ್ನ ವಿರುದ್ಧದ FIR ರದ್ದು ಮಾಡುವಂತೆ ಆದಿತ್ಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ.
ಪ್ರಕರಣ ಬೆಳಕಿಗೆ ಬಂದು ಆದಿತ್ಯ ಆಳ್ವ ಪಾತ್ರ ಇರುವುದು ಖಚಿತವಾದ ಬೆನ್ನಲ್ಲೇ ಹೆಬ್ಬಾಳದಲ್ಲಿರುವ ಮನೆ ಹಾಗೂ ರೆಸಾರ್ಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡ್ರಗ್ಸ್ ಪತ್ತೆಯಾಗಿತ್ತು. ರೆಸಾರ್ಟ್ ಮ್ಯಾನೇಜರ್ ರಾಮ್ ದಾಸ್ನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಲಾಗಿದೆ.
ಆದಿತ್ಯ, ನಟಿ ರಾಗಿಣಿ ಸಂಜನಾ, ವಿರೇನ್ ಖನ್ನ ಸೇರಿದಂತೆ ಸಾಕಷ್ಟು ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ತನ್ನ ಹೌಸ್ ಆಫ್ ಲೈವ್ಸ್ ಮನೆಯಲ್ಲಿ ಪೇಜ್ 3 ಪಾರ್ಟಿ ನಡೆಸುತ್ತಿದ್ದ ಎನ್ನಲಾಗಿದೆ. ಕರೊನಾ ಲಾಕ್ಡೌನ್ ಅಮಯದಲ್ಲೂ ಸೆಲೆಬ್ರಿಟಿಗಳನ್ನು ಕರೆಸಿ ಪಾರ್ಟಿ ನಡೆಸುತ್ತಿದ್ದ. ಖ್ಯಾತ ಉದ್ಯಮಿಗಳು ಹಾಗೂ ಟೆಕ್ಕಿಗಳನ್ನು ಪಾರ್ಟಿಗೆ ಸೆಳೆಯುತ್ತಿದ್ದ ಎಂದು ಹೇಳಾಗಿದೆ.
ವಿರೇನ್ ಖನ್ನನ ಜತೆಗೂಡಿ ಪೇಜ್ 3 ಪಾರ್ಟಿ ನಡೆಸಲಾಗುತ್ತಿತ್ತು. ಪಾರ್ಟಿಯಲ್ಲಿ ಎಕ್ಸ್ ಟಸಿ ಮಾತ್ರೆ, ಎಲ್ಎಲ್ಟಿ ಸ್ಟಿಪ್ಸ್ ಬಳಕೆಯಾಗುತ್ತಿತ್ತು. ಲೂಮ್ ಪೆಪ್ಪರ್ ಸಾಂಬನ ಬಳಿ ವಿರೇನ್ ಖನ್ನ ಡ್ರಗ್ಸ್ ತರೆಸುತ್ತಿದ್ದ. ತಂದಂತ ಡ್ರಗ್ಸ್ ಅನ್ನು ಪಾರ್ಟಿಯಲ್ಲಿ ಆರೋಪಿಗಳು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.
ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಮಾಫಿಯಾ ಕೇಸಿನಲ್ಲಿ ಈಗಾಗಲೇ ಸ್ಯಾಂಡಲ್ವುಡ್ನ ‘ಮಾದಕ’ ನಟಿ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ ಜತೆಗೆ ಹಲವು ಡ್ರಗ್ಸ್ ಪೆಡ್ಲರ್ಗಳು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು, ಸಂಜನಾ ಜಾಮೀನಿನ ಮೇಲೆ ಹೊರಬಂದಿದ್ದಾರೆ.