ವಿಲಾಸಿ ಜೀವನಕ್ಕಾಗಿ ಒಂಟಿಯಾಗಿ ಮನೆ ಕಳ್ಳತನ ಎಸಗುತ್ತಿದ್ದ ಕಳ್ಳ ಜೈಲಿಗೆ

arrest
Published on

ಬೆಂಗಳೂರು : ಮನೆ ಕಳ್ಳತನ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದ ಆರೋಪಿಯನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿಯ ಗಾಂಧಿನಗರ ನಿವಾಸಿ ಸಮೀರ್ ಖಾನ್ ಅಲಿಯಾಸ್ ಶೋಹೆಬ್ ಖಾನ್ (31) ಬಂಧಿತ. ಆರೋಪಿಯಿಂದ 45 ಲಕ್ಷ ರೂ. ಮೌಲ್ಯದ 900 ಗ್ರಾಂ ಚಿನ್ನಾಭರಣ, 1 ಪಲ್ಸರ್ ಜಪ್ತಿ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.

ನ.3ರಂದು ಯಲಹಂಕ ಉಪನಗರದಲ್ಲಿ ಅನಿಲ್ ಕುಮಾರ್ ಎಂಬುವರ ಮನೆ ಕಳ್ಳತನ ಪ್ರಕರಣದ ತನಿಖೆ ಕೈಗೊಳ್ಳಲಾಗಿತ್ತು. ಸ್ಥಳದಲ್ಲಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಚಿಕ್ಕ ವಯಸ್ಸಿನಿಂದಲೇ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಸಮೀರ್, ಹೈದರಾಬಾದ್‌ನಲ್ಲಿ ಪತ್ನಿ ಮತ್ತು ಮಕ್ಕಳನ್ನು ಇರಿಸಿದ್ದ. ಬೀದರ್ ಗ್ರಾಮಾಂತರ ಪೊಲೀಸರು ಕಳ್ಳತನ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. 2 ವರ್ಷ ಜೈಲು ವಾಸ ಅನುಭವಿಸಿ ಹೊರಬಂದು ಮತ್ತೆ ಕೃತ್ಯ ಮುಂದುವರೆಸಿದ್ದ.

ಬೆಂಗಳೂರು, ಬೀದರ್ ಮತ್ತು ತೆಲಂಗಾಣ ಸೇರಿದಂತೆ ನಾನ ಕಡೆ ಬಾಡಿಗೆ ಮನೆ ಮಾಡಿದ್ದ. ಪಲ್ಸರ್ ಬೈಕ್‌ನಲ್ಲಿ ಒಂದು ಜಿಲ್ಲೆಗೆ ಬಂದಾಗ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ. ಬೈಕ್ ನಂಬರ್ ಪ್ಲೆಟ್ ಬದಲಾಯಿಸಿ ಅಲ್ಲಿಂದ ಹೊರಟು ಮತ್ತೆ ಬೇರೆ ಜಿಲ್ಲೆಗೆ ಹೋಗಿ ಅಲ್ಲಿ ಕಳವು ಮಾಡುತ್ತಿದ್ದ. ಮೊದಲು ಮನೆ ಬಾಗಿಲು ತಟ್ಟುತ್ತಿದ್ದ ತೆಗೆದರೆ ಕೋರಿಯರ್ ಎಂದು ಸುಳ್ಳು ವಿಳಾಸ ಹೇಳಿ ಅಲ್ಲಿಂದ ವಾಪಸ್ ಬರುತ್ತಿದ್ದ.

ಮನೆ ಮಾಲೀಕರು ಇಲ್ಲದೆ ಇದ್ದರೇ ಬೀಗ ಒಡೆದು ಚಿನ್ನಾಭರಣ ಕಳವು ಮಾಡುತ್ತಿದ್ದ. ಆರೋಪಿ ಬಂಧನದಿಂದ ನಗರದ ವಿವಿಧ ಠಾಣೆಯಲ್ಲಿ ದಾಖಲಾಗಿದ್ದ 10 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ತೆಲಂಗಾಣ ಪೊಲೀಸರು 2020ನೇ ಜೂನ್‌ನಲ್ಲಿ ಬಂಧಿಸಿದಾಗ 1 ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದ ಬಿಡುಗಡೆಯಾಗಿದ್ದ. ಬೆಂಗಳೂರು ನಗರದ ಹಲವು ಪ್ರಕರಣಗಳಲ್ಲಿ ಜಾಮೀನು ಪಡೆದು ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಲಾಸಿ ಜೀವನ :

ಕದ್ದ ಚಿನ್ನಾಭರಣ ಮಾರಾಟ ಮಾಡಿ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುತ್ತಿದ್ದ. ಉಳಿದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ. ಒಂಟಿಯಾಗಿ ಕಳ್ಳತನ ಕೃತ್ಯಕ್ಕೆ ಇಳಿಯುತ್ತಿದ್ದ. ಸದಾಕಾಲ ಬ್ಯಾಗ್‌ನಲ್ಲಿ ಕನ್ನ ಕಳವಿಗೆ ಬೇಕಾದ ಆಯ್ದುಗಳನ್ನು ಇಟ್ಟುಕೊಳ್ಳುತ್ತಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net