ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿಸಿಲಿಗೆ ಕಾಡು ಪ್ರದೇಶ, ಕಸದ ರಾಶಿ, ಮತ್ತಿತರ ಕಡೆಗಳಲ್ಲಿ ಬೆಂಕಿ ಅವಘಡಗಳು ನಡೆದು ಸ್ವತ್ತುಗಳು ನಾಶವಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸುವ ಪ್ರಕರಣ ಪ್ರತಿವರ್ಷ ನಡೆಯುತ್ತಿರುತ್ತದೆ. ಬೆಂಕಿ ಬಿದ್ದಾಗ ತಕ್ಷಣ ನೆನಪಾಗುವುದು ಅಗ್ನಿಶಾಮಕ ಸಿಬ್ಬಂದಿ. ಬಂಟ್ವಾಳದಲ್ಲಿ ಸುಂದರವಾದ ಹಾಗೂ ಸುಸಜ್ಜಿತವಾದ ಅಗ್ನಿಶಾಮಕ ಠಾಣೆಯಿದ್ದರೂ ತುರ್ತು ಸಂದರ್ಭದಲ್ಲಿ ಲಭ್ಯತೆಗಿರುವುದು ಒಂದು ವಾಹನ ಮಾತ್ರ. ಅಗ್ನಿ ಅವಘಡ ದೊಡ್ಡ ಪ್ರಮಾಣದಲ್ಲಿದ್ದರೆ ಅಥವಾ ಒಂದೇ ದಿನ ಎರಡು ಮೂರು ಕಡೆ ಬೆಂಕಿ ದುರಂತಗಳು ಸಂಭವಿಸಿದರೆ ಬೇರೆ ತಾಲೂಕಿನ ಅಗ್ನಿಶಾಮಕ ವಾಹನವನ್ನು ಅವಲಂಬಿಸಬೇಕಾಗಿದೆ.
ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಾಗುತ್ತಿರುವ ವೇಳೆ ಒಂದೇ ವಾಹನವನ್ನು ಅವಲಂಬಿಸಿಕೊಂಡು ಕಾರ್ಯನಿರ್ವಹಿಸುವುದು ಸಿಬ್ಬಂದಿಗೆ ಸವಾಲಾಗುತ್ತಿದೆ. ಎಲ್ಲ ಕರೆಗಳಿಗೆ ಸ್ಪಂದಿಸುವುದು ಕಷ್ಟವಾಗುತ್ತಿದೆ. ಬಂಟ್ವಾಳ ಅಗ್ನಿಶಾಮಕ ಠಾಣೆಯಲ್ಲಿ ಒಂದೇ ವಾಹನ ಕಾರ್ಯಾಚರಿಸುತ್ತಿದ್ದು ಬೆಂಕಿ ಅವಘಡಗಳು ಹೆಚ್ಚಾಗುತ್ತಿರುವುದರಿಂದ ಅನಿವಾರ್ಯವಾಗಿ ಎರಡನೇ ವಾಹನದ ಬೇಡಿಕೆ ಇದೆ. ಇದು ಹಲವು ವರ್ಷದ ಬೇಡಿಕೆಯಾಗಿದ್ದರೂ ಪ್ರಸ್ತಾವನೆಯ ಪಟ್ಟಿಯಲ್ಲಿ ಉಳಿದಿದೆ.
2024ರಲ್ಲಿ ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಬಂದ ಕರೆಯಂತೆ ಒಟ್ಟು 136 ಬೆಂಕಿ ಬಿದ್ದಿರುವ ಪ್ರಕರಣಗಳು ದಾಖಲಾಗಿದ್ದು, 24 ರಕ್ಷಣೆಯ ಕರೆಗಳು ಬಂದಿದ್ದವು. 2023ರ ಮಾರ್ಚ್ ತಿಂಗಳ 12 ದಿನಗಳಲ್ಲಿ 52 ಕರೆಗಳು ದಾಖಲಾಗಿದ್ದವು. ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಒಂದೇ ಸಮಯದಲ್ಲಿ ಹೆಚ್ಚಿನ ಕಾಡ್ಗಿಚ್ಚಿನ ಕರೆಗಳು ಬರುತ್ತಿದ್ದು, ಒಂದು ಘಟನೆಯನ್ನು ಮುಗಿಸಿ ಬರುವುದಕ್ಕೆ ಕನಿಷ್ಠ ನಾಲ್ಕೈದು ಗಂಟೆಯಾದರೂ ಬೇಕಾಗುತ್ತದೆ. ಹೀಗಿರುವಾಗ ಒಂದೇ ಸಮಯಕ್ಕೆ ಹೆಚ್ಚಿನ ಕರೆಗಳು ಬಂದರೆ ಏನ್ನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗುತ್ತದೆ.
ಹೆಚ್ಚುವರಿ ವಾಹನ ಅನಿವಾರ್ಯ
ಬಂಟ್ವಾಳಕ್ಕೆ 2 ಅಗ್ನಿಶಾಮಕ ವಾಹನ ಮಂಜೂರಾಗಿದೆ. ಈ ಪೈಕಿ ಒಂದು ವಾಹನ ತೀರಾ ಹಳೆಯದು. ಪ್ರಸ್ತುತ ಅದು ಕಾರ್ಯಾಚರಣೆಯ ಸ್ಥಿತಿಯಲ್ಲಿ ಇಲ್ಲ. ಸಾರಿಗೆ ನಿಯಮದ ಪ್ರಕಾರ ಆ ವಾಹನವನ್ನು ಸ್ಕ್ರಾಪ್ ಪಟ್ಟಿಗೆ ಸೇರಿಸಲಾಗಿದೆ. ಪಕ್ಕದ ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಈಗಾಗಲೇ 2 ವಾಹನಗಳು ಕಾರ್ಯಾಚರಣೆಯ ಸ್ಥಿತಿಯಲ್ಲಿದ್ದು, ಬಂಟ್ವಾಳಕ್ಕೂ ಹೊಸ ವಾಹನ ಅಗತ್ಯವಿದೆ. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ವಾಮದಪದವು, ಸಿದ್ದಕಟ್ಟೆ, ಪುಂಜಾಲಕಟ್ಟೆ, ವಗ್ಗ, ವಿಟ್ಲ, ಕನ್ಯಾನ, ಫರಂಗಿಪೇಟೆ, ಬಿ.ಸಿ.ರೋಡ್ ಹೀಗೆ ಪ್ರಮುಖ ಸಣ್ಣ ಪಟ್ಟಣಗಳಿವೆ. ಕಳಂಜಿಮಲೆ, ಕೊಡ್ಯಮಲೆ, ಸುಳ್ಳಮಲೆ, ಬಳ್ಳಮಲೆ ಮೊದಲಾದ ಅರಣ್ಯ, ಗುಡ್ಡ, ಪ್ರದೇಶವನ್ನು ಹೊಂದಿದೆ. ಇಷ್ಟು ಪ್ರದೇಶಗಳಿಗೆ ಬಂಟ್ವಾಳ ಬಸ್ತಿಪಡ್ಪುವಿನಿಂದಲೇ ಅಗ್ನಿಶಾಮಕ ವಾಹನ ಹೋಗಬೇಕು ಮಾತ್ರವಲದೆ ವಿಟ್ಲಕ್ಕೂ ಬಂಟ್ವಾಳದಿಂದಲೇ ವಾಹನಗಳು ಹೋಗಬೇಕಾದರೆ, ಸಾಕಷ್ಟು ಸಮಯ ಬೇಕು. ಈ ಹಿನ್ನೆಲೆಯಲ್ಲಿ ವಿಟ್ಲಕ್ಕೂ ಪ್ರತ್ಯೇಕ ಠಾಣೆ ಬೇಡಿಕೆ ಇದೆ.