ಜಿಲ್ಲೆ

ನೂತನ ಸಚಿವರ ಪ್ರಮಾಣ ವಚನಕ್ಕೂ ಮುನ್ನವೇ ಸಿಎಂ ಬಿಎಸ್​ವೈ ವಿರುದ್ಧ ಎಚ್​. ವಿಶ್ವನಾಥ್​ ಗುಡುಗು

ಮೈಸೂರು: ನೂತನ ಸಚಿವರ ಪ್ರಮಾಣ ವಚನಕ್ಕೂ ಮುನ್ನವೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ತು ಸದಸ್ಯ ಅಡಗೂರು ಎಚ್.ವಿಶ್ವನಾಥ್ ಗುಡುಗಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ನಾಲಿಗೆ ಹಾಗೂ ಮಾತು ಕಳೆದುಕೊಂಡಿದ್ದಾರೆ. ನಾನು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತಂದೆ. ಸಿಎಂ ಆಗುವವರೆಗೂ ಜತೆಗಿದ್ದೆ. ಅವರು ಒಂದೇ ಒಂದು ದಿನ ವಿಶ್ವನಾಥ್ ಹೆಸರು ಹೇಳಲಿಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಪ್ರಯತ್ನ ಪಟ್ಟೆ‌. ಅವರೂ ಸಹ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ರಾಜಕೀಯ ನಾಯಕರು ಸಮಯಕ್ಕೆ ಅಷ್ಟೆ. ಯಾರಿಗೂ ಕೃತಜ್ಞತೆ ಇಲ್ಲ. ನಾಗೇಶನನ್ನು ಯಾಕೆ ಸಂಪುಟದಿಂದ ತೆಗೆಯಬೇಕು? ಮುನಿರತ್ನಗೆ ಯಾಕೆ ಸಚಿವ ಸ್ಥಾನ ಕೊಡುತ್ತಿಲ್ಲ? ಯೋಗೀಶ್ವರ್‌ಗೆ ಯಾಕೆ ಕೊಡುತ್ತಿದ್ದೀರಿ? ಎಂದು ಪ್ರಶ್ನಿಸಿರುವ ವಿಶ್ವನಾಥ್​, ಯೋಗೀಶ್ವರ್​ ವಿರುದ್ಧ 420 ಕೇಸ್ ಇದೆ. ಅವನು ವಂಚಕ. ಸಾವಿರಾರು ಜನರಿಗೆ ಮೋಸ ಮಾಡಿದ್ದಾನೆ. ಅವನಿಗೆ ನೀವೇನಾದರೂ ಸಿಕ್ಕಿ ಹಾಕಿಕೊಂಡಿದ್ದೀರಾ? ಎಂದು ಬಿಎಸ್​ವೈರನ್ನು ಪ್ರಶ್ನಿಸಿದರು.

ಯಾರ್ರೀ ಈ ಸೈನಿಕ? ಹುಣಸೂರು ಚುನಾವಣೆಗೆ ಬಂದು ದುಡ್ಡು ತೆಗೆದುಕೊಂಡು ಓಡಿಹೋದ. 15 ಜನರ ಭಿಕ್ಷೆ, ಮರ್ಜಿಯಲ್ಲಿ ನೀವಿದ್ದೀರಿ. ಅದನ್ನು ನೀವು ನೆನಪಿಸಿಕೊಳ್ಳಬೇಕು. 13 ವೀರಶೈವರು ಸಂಪುಟದಲ್ಲಿದ್ದಾರೆ‌. ಅಂದರೆ ಶೇ.44ರಷ್ಟು ಆಯಿತು. ಶೇ. 37ರಷ್ಟು ಒಕ್ಕಲಿಗರು ಇದ್ದಾರೆ. ೪ ಕುರುಬರು ಇದ್ದಾರೆ. ಎಲ್ಲಿದೆ ಸಾಮಾಜಿಕ ನ್ಯಾಯ? ಎಂದು ಬೇಸರ ಹೊರಹಾಕಿದರು.