ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಇಂದು ಸಾವಿಗೀಡಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾಳೆ ಅವಕಾಶ ಇರಲಿದೆ.
ಮೂರು ದಿನಗಳ ಹಿಂದೆ ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವರಾಂ ಇಂದು ಕೊನೆಯುಸಿರೆಳೆದಿದ್ದು, ಅವರ ಮಿದುಳು ನಿಷ್ಕ್ರಿಯಗೊಂಡು ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ವಾರ ಕಾರಿನಲ್ಲಿ ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಶಿವರಾಂ ಅವರ ತಲೆಗೆ ಪೆಟ್ಟಾಗಿತ್ತು. ಬಳಿಕ ಅವರನ್ನು ತಪಾಸಣೆಗೆ ಒಳಪಡಿಸಿದ್ದು, ಎಲ್ಲ ಸಹಜವಿರುವುದಾಗಿ ಕಂಡುಬಂದಿದ್ದರಿಂದ ಮನೆಗೆ ಕರೆತರಲಾಗಿತ್ತು.
ನಂತರ ಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ಪೂಜೆ ಸಲುವಾಗಿ ಕೋಣೆಗೆ ಹೋಗಿದ್ದಾಗ ಕೆಳಕ್ಕೆ ಬಿದ್ದಿದ್ದರಿಂದ ತಲೆಗೆ ಮತ್ತೆ ಬಲವಾದ ಪೆಟ್ಟಾಗಿರುವುದು ತಿಳಿದುಬಂತು. ಸ್ಕ್ಯಾನಿಂಗ್ ಮಾಡಿಸಿದ್ದಾಗ ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದು ತಿಳಿಯಿತು. ಆ ನಂತರ ಕೋಮಾಗೆ ಜಾರಿದ್ದ ಶಿವರಾಂ ಮೆದುಳು ನಿಷ್ಕ್ರಿಯಗೊಂಡು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಡಾ.ರಾಜ್ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್
ಚಿತ್ರರಂಗದ ಗಣ್ಯರು, ಒಡನಾಡಿಗಳು, ಅಭಿಮಾನಿಗಳೆಲ್ಲರಿಗೂ ಅಂತಿಮ ದರ್ಶನ ಪಡೆಯಲಿಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದ್ದು, ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ನಟ ಶಿವರಾಂ ಅವರ ಪಾರ್ಥಿವ ಶರೀರವನ್ನು ಇರಿಸಲಾಗವುದು. ಅಲ್ಲಿ ಎರಡು ಗಂಟೆಗಳ ಕಾಲ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಬಳಿಕ ಬನಶಂಕರಿಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.