ನಟ ಶ್ರೀಮುರಳಿ ಕೊರಳಿಗೆ 450 ಕೆ.ಜಿ. ಸೇಬು ಹಾರ: ಇದರ ಬೆಲೆಯೇ ರೂಪಾಯಿ 80 ಸಾವಿರ..

1197665
Published on

ಬೆಂಗಳೂರು: ರೋರಿಂಗ್ ಸ್ಟಾರ್ ನಟ ಶ್ರೀಮುರಳಿ ಅವರ ಸಿನಿಮಾ ಬಿಡುಗಡೆಯಾಗುತ್ತೆ ಅಂದರೆ ತಯಾರಿಗಳು ಹೇಗಿರುತ್ತವೆ ಎಂದು ಎಲ್ಲರಿಗೂ ಗೊತ್ತಿದೆ. ಯಾಕೆಂದರೆ ಅವರಿಗೆ ಇರುವಂತಹ ಕ್ರೇಜ್ ಅಂಥದ್ದು. ಇಂದು ಡಿ.3ರಂದು ಅವರ 'ಮದಗಜ' ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲಿರುವ ಅಭಿಮಾನವನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸಿಕೊಂಡಿದ್ದಾರೆ. ಅಂತಹ ಅಭಿಮಾನದ ಪೈಕಿ ಒಂದು ಸೇಬು ಹಣ್ಣಿನ ಹಾರ ತುಂಬಾ ಗಮನ ಸೆಳೆದಿದೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳು 'ಮದಗಜ' ಸಿನಿಮಾದ ಅಬ್ಬರ ನೋಡಿದ್ದು, ತಮ್ಮ ನಟನಿಗೆಂದು ಪಟಾಕಿ ಹೊಡೆದರು, ನಟನ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿದರು. ಆದರೆ, ಬೆಂಗಳೂರಿನ ಅನುಪಮಾ ಚಿತ್ರಮಂದಿರ ಬಳಿ ಶ್ರೀಮುರಳಿಗೆ ಕ್ರೇನ್ ಮೂಲಕ 450 ಕೆ.ಜಿ. ಸೇಬು ಹಣ್ಣಿನ ಹಾರ ಹಾಕಲಾಗಿದೆ. ಅದರಲ್ಲಿ ಒಂದು ಸೇಬನ್ನು ಶ್ರೀಮುರಳಿ ಕಿತ್ತು ತಿಂದಿರುವ ದೃಶ್ಯವು ಈಗ ವೈರಲ್ ಆಗುತ್ತಿದೆ. ಅಭಿಮಾನಿಗಳೇ ಸೇರಿ ಈ ಸೇಬು ಹಣ್ಣನ್ನು ಪೋಣಿಸಿದರು. 450 ಕೆ.ಜಿ.ಯ ಈ ಸೇಬು ಹಾರಕ್ಕೆ ಬರೋಬ್ಬರಿ 80,000 ಖರ್ಚು ಮಾಡಲಾಗಿದೆ.

ಅನುಪಮಾ ಚಿತ್ರಮಂದಿರದ ಬಳಿ ನಡೆದ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ ಭಾಗವಹಿಸಿ ಅಭಿಮಾನಿಗಳ ಜೊತೆ ಸೇರಿ ಕುಣಿದು ಕುಪ್ಪಳಿಸಿದರು. ಅಭಿಮಾನಿಗಳ ಜೊತೆ ಈ ಸಂದರ್ಭದಲ್ಲಿ 'ಅಪ್ಪು' ಅವರಿಗೆ ಜೈಕಾರ ಹಾಕಿದ್ದಾರೆ ಶ್ರೀಮುರಳಿ. ಈ ಘಟನೆ ಸದ್ಯ ಎಲ್ಲರ ಮನ ಗೆದ್ದಿದೆ. 'ಮದಗಜ' ಸಿನಿಮಾ 800ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ತೆರೆಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net