ಜಿಲ್ಲೆ

ಕಳ್ ನನ್ ಮಕ್ಕಳ ಬಗ್ಗೆ ಮಾತನಾಡಲ್ಲ; ದರ್ಶನ್​ಗೆ ಜಾಮೀನು ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಬಹುಭಾಷಾ ನಟ Prakash Raj

Webdesk - Manjunatha B

ಮೈಸೂರು: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ (Darshan) ಹಾಗೂ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್​ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದ್ದು, ದರ್ಶನ್​ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಇನ್ನೂ ನಟ ದರ್ಶನ್​ಗೆ ಜಾಮೀನು ದೊರೆತ ವಿಚಾರ ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಸಂಭ್ರಮಿಸುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇನ್ನೂ ಈ ಬಗ್ಗೆ ನಟ ಪ್ರಕಾಶ್​ ರಾಜ್​ (Prakash Raj) ಅವರನ್ನು ಪ್ರಶ್ನಿಸಿದಾಗ ನಾನು ಕಳ್ಳ ನನ್ನ ಮಕ್ಕಳ ಬಗ್ಗೆ ಮಾತನಾಡಲು ಬಂದಿಲ್ಲ ಎಂದು ಹೇಳುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ನಟ ಪ್ರಕಾಶ್​ ರಾಜ್​ (Prakash Raj) ಅವರು ಮೈಸೂರಿನ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ನಟ ದರ್ಶನ್​ ಅವರಿಗೆ ಜಾಮೀನು ಮಂಜೂರಾದ ಬಗ್ಗೆ ಕೇಳಲಾಗಿದೆ ಇದಕ್ಕೆ ಉತ್ತರಿಸಿದ ನಟ ಪ್ರಕಾಶ್​ ರಾಜ್​, ನಾನು ಸಿನಿಮಾ ಹಾಗೂ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ನಾನು ನನ್ನ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ ನನ್ ಮಕ್ಕಳ ಬಗ್ಗೆ ಮಾತನಾಡಲು ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಬೆನ್ನು ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್​ ಅವರಿಗೆ ಇನ್ನಷ್ಟೇ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಇನ್ನೂ ನೆಚ್ಚಿನ ನಟನಿಗೆ ಹನುಮ ಜಯಂತಿಯಂದೇ ಜಾಮೀನು ಸಿಕ್ಕಿರುವ ವಿಚಾರ ತಿಳಿದು ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.