ಬೆಂಗಳೂರು: ಸಿಗರೇಟ್ ಮತ್ತು ಮಾಸ್ಕ್ ಸಗಟು ವ್ಯಾಪಾರಿಗಳಿಂದ ಸಿಸಿಬಿಯ ಎಸಿಪಿ ಮತ್ತು ಇನ್ಸ್ಪೆಕ್ಟರ್ಗಳು ಕೋಟ್ಯಂತರ ರೂ. ಲಂಚ ಪಡೆದ ಪ್ರಕರಣವನ್ನು ಎಸಿಬಿ ತನಿಖೆಗೂ ಸಹ ಸೂಚಿಸಲಾಗಿದೆ.
ಅಮಾನತುಗೊಂಡಿರುವ ಸಿಸಿಬಿಯ ಎಸಿಪಿ ಪ್ರಭುಶಂಕರ್ ಹಾಗೂ ಇನ್ಸ್ಪೆಕ್ಟರ್ಗಳಾದ ಅಜಯ್ ಮತ್ತು ನಿರಂಜನ್ಕುಮಾರ್ ಆರೋಪಿಗಳು. ಮೂವರ ವಿರುದ್ಧ ಲಂಚ ಸ್ವೀಕಾರ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪದಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಎಸಿಬಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.
ಇದನ್ನೂ ಓದಿ: ರೇಪಿಸ್ಟ್ ತಂದೆಯನ್ನು ಬರ್ಬರ ಹತ್ಯೆಗೈದಿದ್ದ ಮೂವರು ಸಹೋದರಿಯರ ಬೆನ್ನಿಗೆ ನಿಂತ ಕೋರ್ಟ್, ತನಿಖಾ ಸಮಿತಿ!
ಕರೊನಾ ಲಾಕ್ಡೌನ್ ಸಮಯ ದುರುಪಯೋಗ ಮಾಡಿಕೊಂಡ ಎಸಿಪಿ ಮತ್ತು ಇನ್ಸ್ಪೆಕ್ಟರ್ಗಳು, ಅಕ್ರಮ ದಾಸ್ತಾನು ಮತ್ತು ದುಬಾರಿ ಬೆಲೆಗೆ ಮಾರಾಟದ ನೆಪದಲ್ಲಿ ನಗರದ ಹಲವೆಡೆ ದಾಳಿ ನಡೆಸಿದ್ದರು. ಕೆ.ಆರ್. ಪುರ, ಬಾಣಸವಾಡಿಯಲ್ಲಿ ಸಿಗರೇಟ್ ಮತ್ತು ಮಾಸ್ಕ್ ಸಗಟು ವ್ಯಾಪಾರಿಗಳ ಮೇಲೆ ದಾಳಿ ನಡೆಸಿದ್ದರು. ಅಜಯ್ ಮತ್ತು ನಿರಂಜನಕುಮಾರ್ ಸಿಗರೇಟ್ ವಿತರಕರಿಂದ ಪ್ರತ್ಯೇಕವಾಗಿ ಹಣ ಸುಲಿಗೆ ಮಾಡಿದ ಎಸಿಪಿ, ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರು. ಎಂ.ಡಿ. ಆಂಡ್ ಸನ್ಸ್ ಕಂಪನಿಯಿಂದ ಪ್ರಭುಶಂಕರ್ 62.5 ಲಕ್ಷ ರೂ. ಹಾಗೂ ಅಜಯ್ ಮತ್ತು ನಿರಂಜನ್ ಶ್ರೀನಗರದಲ್ಲಿ ಸಿಗರೇಟ್ ವ್ಯಾಪಾರಿ ಸಂತೋಷ್ ಮತ್ತು ಮಾಸ್ಕ್ ವ್ಯಾಪಾರಿಯಿಂದ 30 ಲಕ್ಷ ರೂ. ಪಡೆದಿದ್ದಾರೆಂದು ಆರೋಪಿಸಲಾಗಿದೆ.
ಸಿಗರೇಟ್ ವ್ಯಾಪಾರಿಗಳಿಂದಲೇ ಅಂದಾಜು 1.75 ಕೋಟಿ ರೂ. ಸುಲಿಗೆ ಮಾಡಲಾಗಿದೆ. ಅಲ್ಲದೆ, ಬಾಣಸವಾಡಿಯಲ್ಲಿ ಮಾಸ್ಕ್ ವ್ಯಾಪಾರಿಯ ಮೇಲೆ ದಾಳಿ ನಡೆಸಿ 20 ಲಕ್ಷ ರೂ. ಮೌಲ್ಯದ ನಕಲಿ ಎನ್ 95 ಮಾಸ್ಕ್ ಜಪ್ತಿ ಮಾಡುವ ಜತೆಗೆ 30 ಲಕ್ಷ ರೂ. ಕಿಕ್ಬ್ಯಾಕ್ ಪಡೆದಿದ್ದರು. ಎಸಿಪಿ ಮತ್ತು ಇನ್ಸ್ಪೆಕ್ಟರ್ಗಳ ಕಳ್ಳಾಟ ಮೇಲಧಿಕಾರಿಗಳಿಗೆ ಗೊತ್ತಾದ ಕೂಡಲೇ ಸಿಸಿಬಿಯ ಡಿಸಿಪಿ-2 ಕೆ.ಪಿ. ರವಿಕುಮಾರ್ ಮತ್ತು ಡಿಸಿಪಿ-1 ಕುಲದೀಪ್ ಜೈನ್ ಕಡೆಯಿಂದ ಪ್ರತ್ಯೇಕವಾಗಿ ಆಂತರಿಕ ತನಿಖೆ ನಡೆಸಿದಾಗ ವ್ಯಾಪಾರಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಆಂತರಿಕ ತನಿಖೆ ವರದಿಯನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮೂಲಕ ಡಿಜಿಪಿ ಪ್ರವೀಣ್ ಸೂದ್ಗೆ ಸಲ್ಲಿಸಿದ್ದರು.
ಇದನ್ನೂ ಓದಿ: ಈಜುಕೊಳದಲ್ಲಿ ಮೋಜು ಮಾಡುತ್ತಿದ್ದ ಬ್ಯೂಟಿ ಕ್ವೀನ್- ಸ್ನೇಹಿತ ಸಮೇತ ಸೀದಾ ಕ್ವಾರಂಟೈನ್ಗೆ ಒಯ್ದ ಪೊಲೀಸರು!
ಡಿಜಿಪಿ ಸೂಚನೆ ಮೇರೆಗೆ ಕಾಟನ್ಪೇಟೆ ಠಾಣೆಯಲ್ಲಿ ಎಸಿಪಿ ಮತ್ತು ಇಬ್ಬರು ಇನ್ಸ್ಪೆಕ್ಟರ್ಗಳ ವಿರುದ್ಧ ಬೆದರಿಸಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ. ಪ್ರಕರಣದ ಗಂಭೀರತೆ ಅರಿತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ನಡೆಸಬೇಕೆಂದು ಎಸಿಬಿಗೂ ಪ್ರಕರಣವನ್ನು ವಹಿಸಲಾಗಿದೆ. ಇದೀಗ ಎಸಿಬಿಯಲ್ಲಿಯೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೊಲೀಸರ ಬಂಧನ ಯಾಕಿಲ್ಲ?
ಸಿಸಿಬಿಯ ಎಸಿಪಿ ಮತ್ತು ಇನ್ಸ್ಪೆಕ್ಟರ್ಗಳ ವಿರುದ್ಧ ಸುಲಿಗೆ ಹಾಗೂ ಲಂಚ ಪಡೆದ ಆರೋಪವಿದೆ. ಕಾಟನ್ಪೇಟೆ ಠಾಣೆಯಲ್ಲಿ ಮೇ 12ರಂದೇ ಎರಡು ಎಫ್ಐಆರ್ ದಾಖಲಾಗಿವೆ. ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ. ಇದೇ ಪ್ರಕರಣವನ್ನು ಎಸಿಬಿ ತನಿಖೆಗೂ ವಹಿಸಲಾಗಿದೆ. ಆದರೆ, ಇಲ್ಲಿಯವರೆಗೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಪ್ರಕರಣದ ಬಗ್ಗೆ ಮಾಹಿತಿ ನೀಡಲು ಸಹ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಎಸಿಬಿಯಲ್ಲಿ ಪ್ರತ್ಯೇಕ ಎಫ್ಐಆರ್
ಎಸಿಪಿ ಪ್ರಭುಶಂಕರ್, ಇನ್ಸ್ಪೆಕ್ಟರ್ಗಳಾದ ಅಜಯ್ ಮತ್ತು ನಿರಂಜನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಳ್ಳಲಿದ್ದಾರೆ. ಪ್ರಕರಣದಲ್ಲಿ ಎಸಿಪಿಯೇ ಆರೋಪಿಯಾಗಿರುವ ಕಾರಣಕ್ಕೆ ಎಸ್ಪಿ ದರ್ಜೆ ಅಧಿಕಾರಿಯಿಂದ ತನಿಖೆ ನಡೆಯಲಿದೆ. ಸಿಗರೇಟ್, ಮಾಸ್ಕ್ ಸಗಟು ವ್ಯಾಪಾರಿಗಳಿಂದ ಲಂಚ ಪಡೆದ ಆರೋಪಕ್ಕೆ ತನಿಖೆ ಸೀಮಿತವೋ ಅಥವಾ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿಯೂ ತನಿಖೆ ನಡೆಸುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರ್ಕಾರದ ಅನುಮತಿಗೆ ಪತ್ರ
ಮೇ 13ರಂದು ಎಸಿಪಿ ಮತ್ತು ಇಬ್ಬರು ಇನ್ಸ್ಪೆಕ್ಟರ್ಗಳ ವಿರುದ್ಧದ ಲಂಚ ಪಡೆದ ಆರೋಪ ಪ್ರಕರಣದ ವರದಿಯನ್ನು ಎಸಿಬಿಗೆ ಸಿಸಿಬಿ ಅಧಿಕಾರಿಗಳು ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವ ಮುನ್ನ ಭ್ರಷ್ಟಾಚಾರ ತಡೆ ಕಾಯ್ದೆ 17ಎ ಅಡಿ ಅನುಮತಿ ಪಡೆಯಲು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಅಥವಾ ಶನಿವಾರ ಪತ್ರ ಬರೆದು ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.ಆ ನಂತರ ತನಿಖೆ ಆರಂಭವಾಗಲಿದೆ ಎಂದು ಎಸಿಬಿ ಮೂಲಗಳು ವಿಜಯವಾಣಿಗೆ ತಿಳಿಸಿವೆ.